ಮೂರ್ನಾಡು, ಅ. 2 : ಸಮಾಜದ ಆಚಾರ ವಿಚಾರ ಸಂಸ್ಕøತಿಗಳನ್ನು ಬಿಂಬಿಸುವ ಕಾರ್ಯವು ಸಂಘಟನೆಗಳ ಮೂಲಕ ಆಗುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.ಮೂರ್ನಾಡು ಹಿಂದೂ ಮಲಯಾಳಿ ಸಂಘದ ವತಿಯಿಂದ ಕೊಡವ ಸಮಾಜದಲ್ಲಿ ಆಯೋಜಿಸಲಾದ 8ನೇ ವರ್ಷದ ಓಣಂ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶ ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಮಾಜ ಒಗ್ಗಟ್ಟಾಗುವ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸಂಘಟನೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗುತ್ತಿದೆ.
ತನ್ನ ಸಮಾಜದ ಬಗ್ಗೆ ಅಭಿಮಾನ ಇಟ್ಟುಕೊಂಡು ಇತರೆ ಸಮಾಜದೊಂದಿಗೆ ಪ್ರೀತಿ, ವಿಶ್ವಾಸದಿಂದ ಜೀವನ ನಡೆಸಬೇಕು. ಸಂಘದ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ಮಾತನಾಡಿ ಜಿಲ್ಲೆಯಲ್ಲಿ ಇಂದು ಅನೇಕ ಭಾಗಗಳಲ್ಲಿ ಹಿಂದೂ ಮಲಯಾಳಿ ಸಂಘಗಳನ್ನು ರಚಿಸಿಕೊಂಡು ಕೇರಳ ಸಂಸ್ಕøತಿ ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಯವರಿಗೆ ತಿಳಿಯಪಡಿಸುತ್ತಿರುವದು ಸಂತೋಷದ ವಿಚಾರ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂರ್ನಾಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕಲಾವತಿ ಪೂವಪ್ಪ, ಶ್ರೀಜಾ ಶಾಜಿ, ಸುನಿತಾ ಮಂಜುನಾಥ್, ಮೂರ್ನಾಡು ಪೊಲೀಸ್ ಉಪಠಾಣೆ ಎಎಸ್‍ಐ ಮೋಹನ್ ಸುಕುಮಾರ್, ಸಿದ್ದಾಪುರ ಕೈರಳಿ ಸಮಾಜ ಅಧ್ಯಕ್ಷ ಶ್ರೀನಿವಾಸ್, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಶಶಿಕುಮಾರ್ ಮಾತನಾಡಿದರು.
ವೇದಿಕೆಯಲ್ಲಿ ಮರಗೋಡು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಬಾಲಕೃಷ್ಣ, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಶಿವಾನಂದ್, ಮೂರ್ನಾಡು ಹಿಂದೂ ಮಲಯಾಳಿ ಸಂಘದ ಉಪಾಧ್ಯಕ್ಷ ಕೆ.ವಿ. ಸುಬ್ರಮಣಿ, ಕಾರ್ಯದರ್ಶಿ ಟಿ. ಸಂತೋಷ್, ಸಹಕಾರ್ಯದರ್ಶಿ ಲೋಹಿದಾಸ್, ಖಜಾಂಚಿ ಎಂ.ಎನ್. ಮೊಪುಲ್, ವಾಸು, ಪರಮೇಶ್ವರ್, ಸಿ.ಕೆ. ಶಶಿ, ಮೋನಿಷ್, ಗೋಪಿ, ಕುಮಾರ್, ಚಂದ್ರ, ಟಿ.ಕೆ. ಚಂದ್ರ, ರಾಜನ್, ರಾಜೇಶ್, ಸಜೀವ, ಸಲಹಾ ಸಮಿತಿ ಸದಸ್ಯ ಕೆ.ಟಿ.ಕೆ. ಮೋಹನ್, ಕೆ.ಕೆ. ಗೋವಿಂದನ್, ಟಿ.ಕೆ. ಸುಧೀರ್, ಎನ್.ಕೆ. ಅಜಿತ್ ಕುಮಾರ್, ಎನ್.ಕೆ. ವಿಜಯನ್, ಕೆ. ಅರವಿಂದನ್, ಎನ್.ಕೆ. ಮುರಳಿ, ಬಿ.ಕೆ. ಬಾಸ್ಕರನ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸಂಘದ ವತಿಯಿಂದ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಚೈತ್ರ, ಅಜಿತ್, ರಕ್ಷಿತಾ, ನವ್ಯ ಮುರಳಿ ಅವರಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಗಣೇಶ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಓಣಂ ಆಚರಣೆ ಅಂಗವಾಗಿ ಪಟ್ಟಣದ ಮುಖ್ಯ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಯಿತು. ಸಿಂಗಾರಿ ಮೇಳದೊಂದಿಗೆ ಕೊಡವ ಸಮಾಜದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಮಹಾಬಲಿ, ತೆಯ್ಯಂ ವೇಷಧಾರಿಗಳು ಮೆರವಣಿಗೆಗೆ ಮೆರಗು ತಂದವು. ಕೇರಳೀಯ ಸಾಂಪ್ರದಾಯಿಕ ಉಡುಗೆ ತೊಡುಗೆ ಧರಿಸಿ ಮಹಿಳೆಯರು ಹಾಗೂ ಪುರುಷರು ಮೆರವಣಿಗೆ ಯಲ್ಲಿ ಪಾಲ್ಗೊಂಡು ಗಮನ ಸೆಳೆದರು.
ಹಬ್ಬದ ಪ್ರಯುಕ್ತ ಬೆಳಿಗ್ಗೆ ಕೊಡವ ಸಮಾಜದ ಆವರಣದಲ್ಲಿ ಹೂವಿನ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ 11 ತಂಡಗಳು ಪಾಲ್ಗೊಂಡು ಪುರುಷರು, ಮಹಿಳೆಯರು, ಮಕ್ಕಳು ಎನ್ನುವ ಬೇಧವಿಲ್ಲದೆ ಒಂದಕ್ಕಿಂತ ಒಂದು ಅಂದದ ಹೂವಿನ ರಂಗೋಲಿಗಳನ್ನು ರಚಿಸಿ ಪೈಪೋಟಿ ನೀಡಿದರು. ವರ್ಣಮಯ ಹೂವಿನ ರಂಗೋಲಿಗಳು ನೆರೆದವರ ಗಮನ ಸೆಳೆಯಿತು. ಚಂದ್ರಿಕಾ, ಬಾಡಗ (ಪ್ರ), ನಿಶಾ ಕಿಶೋರ್, ಐಕೊಳ (ದ್ವಿ), ಮಿಥುನ್, ಕಬಡಕೇರಿ (ತೃ), ಧನ್ಯ, ಕಿಗ್ಗಾಲು (ನಾಲ್ಕನೆ) ಬಹುಮಾನ ಪಡೆದುಕೊಂಡರು. ಮಧ್ಯಾಹ್ನ ಬಳಿಕ ಸಂಜೆವರೆಗೆ ಕೊಯಿಲಾಂಡಿ ಅರಂಙ ತಂಡದಿಂದ ನಾಟ್ಟುಣರ್‍ವ್ ಕಾರ್ಯಕ್ರಮ ಸಾರ್ವಜನಿಕರನ್ನು ರಂಜಿಸಿತು.