ಶ್ರೀಮಂಗಲ, ನ. 15: ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಶ್ರೀಮಂಗಲ ಗ್ರಾ.ಪಂ.ಗೆ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಮಾತನಾಡಿ, ಶ್ರೀಮಂಗಲ ಗ್ರಾ.ಪಂ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸಮಸ್ಯೆಗಳ ಬಗ್ಗೆ ವಿವರಿಸಿ ಶಾಸಕರಿಂದ ಪರಿಹಾರ ಪಡೆದುಕೊಳ್ಳಬೇಕೆಂದರು.

ಶ್ರೀಮಂಗಲ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ತಮ್ಮು ಮುತ್ತಣ್ಣ ಹಾಗೂ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ, ಶ್ರೀಮಂಗಲ ಗ್ರಾ.ಪಂ.ಗೆ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಇಲ್ಲದೆ ಯಾವದೇ ಕೆಲಸ ನಡೆಯುತ್ತಿಲ್ಲ. ತಕ್ಷಣ ಪಿ.ಡಿ.ಓ.ರನ್ನು ನಿಯೋಜಿಸಬೇಕು. ಹಾಗೂ ಸಮರ್ಪಕ ಅನುದಾನ ಕೊಡಿಸಿಕೊಡಬೇಕು. ಬರಗಾಲ ಪರಿಹಾರಕ್ಕೆ ಹಲವು ಅರ್ಜಿಗಳು ಸಲ್ಲಿಸಿದ್ದರೂ ಯಾವದೇ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷದ ಅತಿವೃಷ್ಟಿ ಪರಿಹಾರಕ್ಕೆ ಸಲ್ಲಿಸಿದ್ದ ಅರ್ಜಿಗೆ ಇದುವರೆಗೂ ಪರಿಹಾರ ಬಂದಿರುವದಿಲ್ಲ. ಕೂಲಿ ಕಾರ್ಮಿಕರ ಸಮಸ್ಯೆ, ಅತಿಯಾದ ಕೂಲಿ, ಆನೆ ಹಾವಳಿ, ಗೊಬ್ಬರದ ಅತಿಯಾದ ಬೆಲೆ, ದರ ಕುಸಿತ ಸೇರಿದಂತೆ ಹಲವು ಸಮಸ್ಯೆಗಳಿಂದ ಬೆಳೆಗಾರರು ತೊಂದರೆ ಅನುಭವಿಸಿದ್ದಾರೆ. ಇದರೊಂದಿಗೆ ಕಂದಾಯ ಹಾಗೂ ಸರ್ವೆ ಇಲಾಖೆಯಲ್ಲಿ ಬೆಳೆಗಾರರಿಗೆ ಯಾವದೇ ಸ್ಪಂದನೆ ಸಿಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕು ಹಾಗೂ ತಮ್ಮ ಶಾಸಕರ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ಕೆ ನೀಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅವರು, ಸ್ಥಳದಿಂದಲೇ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ತಕ್ಷಣ ಶ್ರೀಮಂಗಲ ಗ್ರಾ.ಪಂ.ಗೆ ಪಿ.ಡಿ.ಓ.ರನ್ನು ನಿಯೋಜಿಸುವಂತೆ ಚರ್ಚಿಸಿದರು. ಜಿಲ್ಲಾಧಿಕಾರಿಯವರು ಒಂದು ವಾರದ ಒಳಗೆ ನಿಯೋಜಿಸುವಂತೆ ಭರವಸೆ ನೀಡಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕಾಗುತ್ತದೆ. ನಂತರ ಪಕ್ಷಬೇಧವಿಲ್ಲದೆ ಅಭಿವೃದ್ದಿ ಕಾರ್ಯಕ್ಕೆ ಸ್ಪಂದಿಸುತ್ತೇನೆ. ಯಾವದೇ ಸರಕಾರವನ್ನು ದೂಷಿಸುವದಿಲ್ಲ. ಸಮಸ್ಯೆಗೆ ಪರಿಹಾರ ಸಿಗದಿದ್ದರೆ ನಿಮ್ಮೊಂದಿಗೆ ಸೇರಿ ಹೋರಾಟ ಮಾಡಲು ಸಿದ್ಧ. ಆನೆ ಹಾವಳಿ ತಡೆಗಟ್ಟುವ ಬಗ್ಗೆ ಕಂದಾಯ ಹಾಗೂ ಸರ್ವೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಈಗಾಗಲೇ ಲೋಕಸಭಾ ಸದಸ್ಯರೊಂದಿಗೆ ಚರ್ಚಿಸಿದ್ದೇನೆ. ಬೆಳಗಾವಿ ಅಧಿವೇಶನದಲ್ಲಿ ಅರಣ್ಯ ಮಂತ್ರಿ ಹಾಗೂ ಕೊಡಗಿನ ಚುನಾಯಿತ ಜನಪ್ರತಿನಿಧಿಗಳಾದ ನಾವೆಲ್ಲರೂ ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದರು.

ಕೊಡಗಿನ ಜನತೆ ಸೇರಿದಂತೆ ಕರ್ನಾಟಕದ ಜನತೆಗೆ, ವಿಧಾನ ಮಂಡಲದ ಯಾರಿಗೂ ಇಷ್ಟ ಇಲ್ಲದಿದ್ದರೂ ಮುಖ್ಯಮಂತ್ರಿಗಳು ತಮ್ಮ ಮೊಂಡುತನದಿಂದ ಟಿಪ್ಪು ಜಯಂತಿ ಆಚರಿಸಿದ್ದು, ಎಲ್ಲರಿಗೂ ಬೇಸರ ತಂದಿದೆ. ಮಂತ್ರಿ ತನ್ವೀರ್ ಸೇಠ್ ಅವರ ಪ್ರಕರಣ ಮುಖ್ಯಮಂತ್ರಿಗಳಿಗೆ ಬಳುವಳಿಯಾಗಿದೆ ಎಂದು ವ್ಯಂಗ್ಯವಾಡಿದರು. ವಿಧಾನ ಪರಿಷತ್ ಸದಸ್ಯರಿಗೆ ವಾರ್ಷಿಕ 2 ಕೋಟಿ ರೂ. ಗಳ ಅನುದಾನ ಮಾತ್ರವಿದ್ದು ಅದನ್ನು ಎಲ್ಲಾ ಗ್ರಾ.ಪಂ.ಗಳಿಗೂ ಸಮಾನಾಂತರವಾಗಿ ಹಂಚಿದರೆ ಎರಡು ಲಕ್ಷವೂ ಬರುವದಿಲ್ಲ. ಆದ್ಯತೆ ಮೇರೆ ಅನುದಾನವನ್ನು ಹಂಚುತ್ತಿದ್ದು, ಮುಂದಿನ ವರ್ಷ 5 ರಿಂದ 10 ಲಕ್ಷದವರೆಗೆ ಅನುದಾನ ನೀಡುವದಾಗಿ ಭರವಸೆ ನೀಡಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿರ ಚಲನ್, ಸದಸ್ಯೆ ಪಿ.ಕೆ. ಸರೋಜ, ಶ್ರೀಮಂಗಲ ಗ್ರಾ.ಪಂ. ಸದಸ್ಯರಾದ ಚೋನಿರ ಕಾಳಯ್ಯ, ಅಜ್ಜಮಾಡ ಜಯಾ, ಅಜ್ಜಮಾಡ ರೇಣು, ಚಂದ್ರ, ಮಂಜು ಉಪಸ್ಥಿತರಿದ್ದರು.