ಹೆಬ್ಬಾಲೆ, ಸೆ. 2: ಮಕ್ಕಳ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಸ್ಪರ್ಧೆ ಅತ್ಯುತ್ತಮ ವೇದಿಕೆಯಾಗಿದೆ ಎಂದು ಡಯಟ್ ಪ್ರಾಂಶುಪಾಲ ದೊಡ್ಡಮಲ್ಲಪ್ಪ ಹೇಳಿದರು.

ಸಮೀಪದ ಶಿರಂಗಾಲ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓದು ಬರಹವಷ್ಟೇ ಶಿಕ್ಷಣವಲ್ಲ, ಬದುಕುವದನ್ನು ಕಲಿಯುವದೇ ಶಿಕ್ಷಣ. ಮಕ್ಕಳ ಸಹಪಠ್ಯ ಚಟುವಟಿಕೆಗಳ ಮೂಲಕ ಅವರ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆಯಾಗಿದೆ. ಈ ವರ್ಷ ಕಲೋತ್ಸವ ವಿನೂತನ ಕಾರ್ಯಕ್ರಮವಾಗಿದ್ದು ಜೂನಿಯರ್ ಕಾಲೇಜು ವಿದ್ಯಾರ್ಥಿಗಳೂ ಭಾಗವಹಿಸಿ ಪ್ರತಿಭಾ ಪ್ರದರ್ಶನ ಮಾಡಬಹುದಾಗಿದೆ. ಇದರ ಸದ್ವಿನಿಯೋಗ ಮಾಡಿಕೊಳ್ಳಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತಾ.ಪಂ. ಸದಸ್ಯ ಜಯಣ್ಣ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಇಂತಹ ಕಾರ್ಯಕ್ರಮ ಅವಶ್ಯಕ ಎಂದರು. ಶಾಲೆಯ ಮುಖ್ಯ ಶಿಕ್ಷಕ ಸೋಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳು ಸದಾ ಚಟುವಟಿಕೆಯಿಂದ ಹಸನ್ಮುಖಿಗಳಾಗಿರಲು ಸಹಕಾರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಎಸ್.ಎಲ್. ತಮ್ಮಯ್ಯ ವಹಿಸಿಕೊಂಡು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ನೌಕರರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ತೊರೆನೂರು ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಹೆಬ್ಬಾಲೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜಶೆಟ್ಟಿ, ಹೆಬ್ಬಾಲೆ ಕ್ಲಸ್ಟರ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಗಿರೀಶ್, ವಿವಿಧ ಶಾಲೆಗಳಿಂದ ಬಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.