ಸೋಮವಾರಪೇಟೆ, ಸೆ. 2: ಕೊಡ್ಲಿಪೇಟೆ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಕೊಡ್ಲಿಪೇಟೆ ಹೋಬಳಿ ಮತ್ತು ಬ್ಯಾಡಗೊಟ್ಟ, ಕೊಡ್ಲಿಪೇಟೆ, ಬೆಸೂರು ಹಾಗೂ ಹಂಡ್ಲಿ ವಲಯಗಳ ಪರಿಶಿಷ್ಟ ಜಾತಿ ವಿಭಾಗದ ಕಾರ್ಯಕರ್ತರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಘಟಕದ ಬ್ಲಾಕ್ ಅಧ್ಯಕ್ಷ ಟಿ.ಈ. ಸುರೇಶ್ ವಹಿಸಿದ್ದರು. ಸಭೆಯಲ್ಲಿ ಭಾಗವಹಿಸಿದ್ದ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ರಾಜ್ಯ ದಲ್ಲಿರುವ ಕಾಂಗ್ರೆಸ್ ಸರ್ಕಾರ ಉತ್ತಮ ಜನಪರ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದು, ರಾಜ್ಯ ಪ್ರಗತಿಯತ್ತ ಮುನ್ನಡೆಯುತ್ತಿದೆ. ಇದರೊಂದಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಶ್ರೇಯೋಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ವಿ.ಕೆ. ಸತೀಶ್ ಕುಮಾರ್, ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ, ಹಂಡ್ಲಿ ವಲಯಾಧ್ಯಕ್ಷ ವೀರೇಂದ್ರ, ಎಸ್.ಸಿ. ವಿಭಾಗದ ಜಿಲ್ಲಾ ಸದಸ್ಯ ರಮೇಶ್, ಕೊಡ್ಲಿಪೇಟೆಯ ಕಾಂಗ್ರೆಸ್ ಮುಖಂಡ ತೇಜಕುಮಾರ್, ಬ್ಯಾಡಗೊಟ್ಟ ಗ್ರಾ.ಪಂ. ಸದಸ್ಯೆ ಹೇಮ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೊಡ್ಲಿಪೇಟೆ ಹೋಬಳಿ ಮತ್ತು 4 ವಲಯಗಳ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳ ಹೆಸರನ್ನು ಬ್ಲಾಕ್ ಕಾಂಗ್ರೆಸ್ಗೆ ಶಿಫಾರಸ್ಸು ಮಾಡುವಂತೆ, ಮುಂದಿನ ವಾರ ನೂತನ ಘಟಕಗಳನ್ನು ರಚಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.