ಮಡಿಕೇರಿ, ಜು. 19: ಅಧಿಕಾರಿಗಳು ವಿನಾಕಾರಣ ಆತ್ಮಹತ್ಯೆ ಬೆದರಿಕೆವೊಡ್ಡಿರುವ ಆರೋಪ ಹೊರಿಸಿ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿರುವದಕ್ಕಾಗಿ ನನ್ನನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ ಎಂದು ಶಿಕ್ಷಣ ಇಲಾಖೆಯ ಕೆ.ಜಿ. ನಾಗೇಂದ್ರ ಆರೋಪಿಸಿದರು.
ಕಳೆದ 10 ವರ್ಷಗಳಿಂದ ಸಂಘದ ಖರ್ಚು ವೆಚ್ಚದ ಬಗ್ಗೆ ಲೆಕ್ಕಪರಿಶೋಧನೆ ಮಾಡಿಲ್ಲ. ಶಿಕ್ಷಕರಿಂದ ತಲಾ 100 ರೂ.ಗಳಂತೆ ಸಂಗ್ರಹಿಸುತ್ತಿರುವ ಸಂಘ ಯಾವದೇ ಲೆಕ್ಕಪತ್ರಗಳನ್ನು ಇಟ್ಟಿಲ್ಲ. ಶಿಕ್ಷಕರ ದಿನಾಚರಣೆಗೆಂದು ಖಾಸಗಿ ಶಾಲೆಗಳಿಂದ ನಿಯಮ ಬಾಹಿರವಾಗಿ ಸಂಘದ ಕೆಲವು ಪದಾಧಿಕಾರಿಗಳು ಹಣ ಸಂಗ್ರಹಿಸುತ್ತಿದ್ದು, ಸಾವಿರಾರು ರೂ. ಮೊತ್ತದ ಹಣ ಸಂಘದ ಖಾತೆಗೆ ಜಮಾ ಆಗುತ್ತಿಲ್ಲ. ಇದರ ವಿರುದ್ಧ ಧ್ವನಿ ಎತ್ತಿ ಸೂಕ್ತ ತನಿಖೆ ಮತ್ತು ಲೆಕ್ಕ ಪರಿಶೋಧನೆಗಾಗಿ ಒತ್ತಾಯಿಸಿದ ಕಾರಣಕ್ಕಾಗಿ ಪದಾಧಿಕಾರಿಗಳು ಹಾಗೂ ಇವರ ಬೆಂಬಲಕ್ಕೆ ನಿಂತಿರುವ ಶಿಕ್ಷಣ ಅಧಿಕಾರಿಗಳು ತಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಬೆದರಿಕೆ ಒಡ್ಡಿದ್ದೇನೆ ಎಂದು ಆರೋಪಿಸಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತಾವು ಇಲ್ಲದ ಸಂದರ್ಭ ಪತ್ನಿಯನ್ನು ವಿಚಾರಣೆ ನಡೆಸಲಾಗಿದೆ. ಪತ್ನಿಯ ಮೇಲೂ ಒತ್ತಡಗಳು ಹೆಚ್ಚಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘದ ಅವ್ಯವಹಾರಗಳು ಹಾಗೂ ಶಿಕ್ಷಣಾಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತನಿಖೆಗಾಗಿ ಒತ್ತಾಯಿಸಿದ ಮನವಿಯನ್ನು ಪುರಸ್ಕರಿಸಿದ್ದು, ನ್ಯಾಯ ದೊರಕಿಸುವ ಭರವಸೆ ನೀಡಿದ್ದಾರೆ ಎಂದು ಕೆ.ಜಿ. ನಾಗೇಂದ್ರ ಪತ್ರಿಕಾಗೊಷ್ಠಿಯಲ್ಲಿ ತಿಳಿಸಿದರು.