ಮಡಿಕೇರಿ, ಜು. 19: ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ಬಗ್ಗೆ ಗಂಭೀರ ಚಿಂತನೆ ಅಗತ್ಯ ಎಂದು ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ ಅವರು ಅಭಿಪ್ರಾಯಿಸಿದ್ದಾರೆ.

ನಗರದ ಹೊರ ವಲಯದಲ್ಲಿರುವ ಕೆ.ನಿಡುಗಣೆ ಪ್ರಾಥಮಿಕ ಶಾಲೆಯಲ್ಲಿ ಕ್ಲಬ್ ಮಹೀಂದ್ರ ವತಿಯಿಂದ ಕೆ. ನಿಡುಗಣೆ, ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಸರ್ಕಾರಿ ಶಾಲೆಗಳ ಒಂದರಿಂದ ಏಳನೇ ತರಗತಿವರೆಗಿನ ಸುಮಾರು 200 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ, ಕೆ. ನಿಡುಗಣೆ ಭಾಗದಲ್ಲಿ ಸರ್ಕಾರಿ ಶಾಲೆಗಳ ಪೈಕಿ ಭಗವತಿನಗರ ಶಾಲೆಯು ಮಕ್ಕಳ ಕೊರತೆಯಿಂದ ಈಗಾಗಲೇ ಮುಚ್ಚಿದೆ. ಆದ್ದಟರಿಂದ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವಲ್ಲಿ ಮುಂದಾಗಬೇಕು ಎಂದರು.

ಗ್ರಾ. ಪಂ. ಮಾಜಿ ಸದಸ್ಯ ಡೀನ್ ಬೋಪಣ್ಣ ಮಾತನಾಡಿ ಕ್ಲಬ್ ಮಹೀಂದ್ರವು 2006 ರಿಂದ ಪ್ರತಿ ವರ್ಷ ಈ ಭಾಗದ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಶಾಲಾ ಬ್ಯಾಗ್, ಕೊಡೆ ವಿತರಿಸುತ್ತಾ ಬರುತ್ತಿದೆ. ಇದೇ ಮಾದರಿಯಲ್ಲಿ ಜಿಲ್ಲೆಯ ಹಲವು ರೆಸಾರ್ಟ್‍ಗಳು ಹಾಗೂ ಸರ್ಕಾರೇತರ ಸಂಸ್ಥೆಗಳು ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಒಳಿತಾಗುವಂತಹ ಸಮಾಜ ಸೇವೆಗಳನ್ನು ಹಮ್ಮಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಕ್ಲಬ್ ಮಹೀಂದ್ರದ ವ್ಯವಸ್ಥಾಪಕ ಮೋಹನ್ ರಾಜ್ ಮಾತನಾಡಿ ಕಳಕೇರಿ, ನಿಡುಗಣೆ, ಹೆಬ್ಬೆಟ್ಟಗೇರಿ, ಮೊಣಕಾಲ್ಮೂರು, ಗಾಳಿಬೀಡು 4 ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಶಾಲಾ ಬ್ಯಾಗ್‍ನ್ನು ವಿತರಿಸಲಾಗುತ್ತಿದೆ ಎಂದರು.

ಗ್ರಾ. ಪಂ. ಉಪಾಧ್ಯಕ್ಷೆ ಜಾಜಿ ಸತೀಶ್, ಗ್ರಾ. ಪಂ. ಸದಸ್ಯರಾದ ಜಯಮ್ಮ, ಅಯ್ಯಪ್ಪ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ದಮಯಂತಿ, ಕ್ಲಬ್ ಮಹೀಂದ್ರದ ನವೀನ್, ಕಾರ್ತಿಕೇಯನ್ ಮತ್ತಿತರರು ಇದ್ದರು.