ಸೋಮವಾರಪೇಟೆ, ಜೂ. 27: ಶಾಲಾ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಆಟೋವೊಂದಕ್ಕೆ ಖಾಸಗಿ ವ್ಯಾನ್ ಡಿಕ್ಕಿಯಾಗಿ ನಾಲ್ವರು ವಿದ್ಯಾರ್ಥಿಗಳಿಗೆ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ಕುಸುಬೂರು ಗ್ರಾಮದ ಬಳಿ ನಡೆದಿದೆ. ಘಟನೆಯಿಂದ ಮೂವರು ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಗೆ ಮತ್ತು ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯೋರ್ವನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಬೆಳಿಗ್ಗೆ 8.45ರ ವೇಳೆಗೆ ಪ್ರವೀಣ್ ಪ್ರಾನ್ಸಿಸ್ ಎಂಬವರಿಗೆ ಸೇರಿದ ಆಟೋ (ಕೆ.ಎ. 12-0827) ಬಜೆಗುಂಡಿಯಿಂದ ಬೇಳೂರು ಗ್ರಾಮದ ಕಡೆಗೆ ತೆರಳುತ್ತಿದ್ದ ಸಂದರ್ಭ ಕುಸುಬೂರು ಗಣಪತಿ ದೇವಸ್ಥಾನದ ಬಳಿ, ಹಿಂಬದಿಯಿಂದ ಬರುತ್ತಿದ್ದ ಸೋಮವಾರಪೇಟೆಯ ಬಿ.ಕೆ.ಪ್ರಕಾಶ್ ಎಂಬವರಿಗೆ ಸೇರಿದ ಖಾಸಗಿ ವ್ಯಾನ್ (ಕೆ.ಎ. 12.ಎ.4867) ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿ ಬೇಳೂರು ದೊರೆ ವೀರರಾಜೇಂದ್ರ ಪ್ರೌಢಶಾಲೆಗೆ ತೆರಳುತ್ತಿದ್ದ ಬಜೆಗುಂಡಿ ಗ್ರಾಮದ 10ನೇ ತರಗತಿ ವಿದ್ಯಾರ್ಥಿಗಳಾದ ಬಿ.ಆರ್. ಹೇಮಂತ್, ಕುಮಾರ್, ಶರತ್, ಜೀವನ್ ಹಾಗೂ ಆಟೋ ಚಾಲಕ ಬಜೆಗುಂಡಿಯ ಅಶ್ವತ್ ಎಂಬವರುಗಳಿಗೆ ತೀವ್ರ ಗಾಯಗಳಾಗಿವೆ.
ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಗಾಯಗೊಂಡ ವಿದ್ಯಾರ್ಥಿಗಳಾದ ಬಿ.ಆರ್. ಹೇಮಂತ್, ಕುಮಾರ್ ಅವರುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಮತ್ತು ಗಂಭೀರವಾಗಿ ಗಾಯಗೊಂಡಿರುವ ಶರತ್‍ನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಿಗ್ಗಿನಿಂದಲೇ ಮಳೆ ಸುರಿಯುತ್ತಿದ್ದರಿಂದ ವಿದ್ಯಾರ್ಥಿಗಳು ಆಟೋದಲ್ಲಿ ಶಾಲೆಗೆ ತೆರಳುತ್ತಿದ್ದರು. ಮಕ್ಕಳನ್ನು ಸಾಗಿಸುತ್ತಿದ್ದ ಆಟೋವನ್ನು ಚಾಲಕ ದಿಢೀರಾಗಿ ನಿಲ್ಲಿಸಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಪ್ರಯಾಣಿಕರು ತುಂಬಿದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದ ಹಿಂಭಾಗ ಹಾಗೂ ವ್ಯಾನ್‍ನ ಮುಂಭಾಗ ಜಖಂಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.