ಮಡಿಕೆÉೀರಿ, ಜೂ. 27 : ವಿದ್ಯಾರ್ಥಿಗಳನ್ನು ಕರೆದೊಯ್ಯುವ ಖಾಸಗಿ ವಾಹನಗಳ ಮೇಲೆ ಅಧಿಕಾರಿಗಳು ನಿರ್ಬಂಧ ಹೇರಿರುವದರಿಂದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕಷ್ಟ ಸಾಧ್ಯವಾಗಿದ್ದು, ಸಾರಿಗೆ ಇಲಾಖೆ ನಿಯಮವನ್ನು ಸಡಿಲಿಸಬೇಕೆಂದು ಪೋಷಕ ವರ್ಗ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಷಕರಾದ ರೆಹನಾ ಬೇಗಂ, ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳಿಗೆ ಅಧಿಕಾರಿಗಳು ನಿರ್ಬಂಧ ಹಾಕಿರುವದರಿಂದ ಪೋಷಕರೇ ಮಕ್ಕಳನ್ನು ಕರೆದೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ನಿಯಮದ ನೆಪವೊಡ್ಡಿ ದಿಢೀರ್ ಆಗಿ ಅಧಿಕಾರಿಗಳು ಕ್ರಮ ಕೈಗೊಂಡಿರುವದರಿಂದ ಗಾಳಿ-ಮಳೆಯ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ವಾಹನದ ವ್ಯವಸ್ಥೆ ಇಲ್ಲದಾಗಿದೆ. ಸರ್ಕಾರ ಕಟ್ಟುನಿಟ್ಟು ಗೊಳಿಸಿರುವ ನಿಯಮವನ್ನು ಸಡಿಲಗೊಳಿಸಬೇಕು. ಈ ಹಿಂದಿನ ರೀತಿಯಲ್ಲೇ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸ ಬೇಕೆಂದು ರೆಹನಾ ಬೇಗಂ ಒತ್ತಾಯಿಸಿದರು.

ವಿದ್ಯಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಿರುವದರಿಂದ ವಾಹನ ಚಾಲಕರು ದುಬಾರಿ ದರವನ್ನು ನಿಗದಿ ಮಾಡುತ್ತಿದ್ದು, ಇದನ್ನು ಭರಿಸಲಾಗದೆ ಸಾಮಾನ್ಯ ಪೋಷಕರು ಸಂಕಷ್ಟ ಎದುರಿಸುವಂತಾಗಿದೆ. ಕಳೆದ ಅನೇಕ ವರ್ಷಗಳಿಂದ ಖಾಸಗಿ ವಾಹನಗಳಲ್ಲೆ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿ ಕೊಡಲಾಗುತ್ತಿದ್ದು, ಇಲ್ಲಿಯವರೆಗೆ ಯಾವದೇ ಅನಾಹುತಗಳು ಸಂಭವಿಸಿಲ್ಲ. ಕುಂದಾಪುರದಲ್ಲಿ ನಡೆದ ಅಪಘಾತವನ್ನು ನೆಪವಾಗಿರಿಸಿಕೊಂಡು ಕೊಡಗಿನಂತಹ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳಿಗೆ ಕಡಿವಾಣ ಹಾಕುವದು ಸರಿಯಾದ ಕ್ರಮವಲ್ಲವೆಂದರು.

ಅಧಿಕಾರಿಗಳು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಿ ಎಂದಿನಂತೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಅವಕಾಶ ನೀಡಬೇಕೆಂದರು.

ಪತ್ರಿಕಾಭವನಕ್ಕೆ ಪೋಷಕರೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಂಕಷ್ಟವನ್ನು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಪೋಷಕರಾದ ರಾಘವೇಂದ್ರ, ಯೋಗಿತಾ ನಿರಂಜನ್, ಜೆ.ಎಂ. ಬಷೀರ್, ಸಾದಿಕ್ ಖಾನ್ ಮತ್ತು ಶಕೀಲ ಹಾಸಿಂ ಉಪಸ್ಥಿತರಿದ್ದರು.