ಸೋಮವಾರಪೇಟೆ,ಜ.25: ಶಾಂತಿ ಪ್ರಿಯ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಸಂಘರ್ಷ ಏರ್ಪಟ್ಟು ಅಶಾಂತಿ ಸೃಷ್ಟಿಯಾಗುತ್ತಿದ್ದು, ಇದು ಮರೆಯಾಗಿ ಸಾಮಾಜಿಕ ಸೌಹಾರ್ದತೆ ನೆಲೆಸಲು ಜಯವೀರಮಾತೆ ಅನುಗ್ರಹಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಪ್ರಾರ್ಥಿಸಿದರು.ಇಲ್ಲಿನ ಸಂತಜೋಸೆಫರ ವಿದ್ಯಾಸಂಸ್ಥೆಗಳ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಯವೀರಮಾತೆ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಲವಾರು ಧರ್ಮಗಳ ಸಮ್ಮಿಲನದೊಂದಿಗೆ ಶ್ರೀಮಂತ ಸಂಸ್ಕøತಿಯನ್ನು ಹೊಂದಿರುವ ಶಾಂತಿಪ್ರಿಯ ರಾಷ್ಟ್ರದ ಪ್ರಜೆಗಳಾಗಿರುವದಕ್ಕೆ ನಾವೆಲ್ಲರೂ ಹೆಮ್ಮೆಪಟ್ಟುಕೊಳ್ಳಬೇಕು. ದೇಶದ ಶಾಂತಿ ಕಾಪಾಡುವದು ಎಲ್ಲರ ಕರ್ತವ್ಯವಾಗಿದೆ. ಶಾಂತಿಯ ನಾಡು ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಸಣ್ಣ ವಿಷಯಗಳಿಗೆ ಶಾಂತಿ ಕದಡುತ್ತಿವೆ. ಇದರಿಂದ ಕೊಡಗು ಮುಕ್ತಿ ಪಡೆಯಲು ಜಯವೀರಮಾತೆ ಹರಸಲಿ ಎಂದು ಸಚಿವರು ಪ್ರಾರ್ಥಿಸಿದರು.

ಸರ್ಕಾರದಿಂದ 50 ಲಕ್ಷ ಅನುದಾನ: ದಾನಿಗಳ ಸಹಕಾರದಿಂದ ಅದ್ಬುತವಾದ ಜಯವೀರಮಾತೆ ದೇವಾಲಯ ನಿರ್ಮಾಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ದೇವಾಲಯ ಅಭಿವೃದ್ಧಿಗೆ ಸರ್ಕಾರ 50ಲಕ್ಷ ರೂ. ಅನುದಾನ ಕಲ್ಪಿಸಿದೆ. ಪ್ರಥಮ ಕಂತಿನಲ್ಲಿ 29.10 ಲಕ್ಷ ರೂ.ಗಳನ್ನು ಬಿಡುಗೊಳಿಸಲಾಗಿದ್ದು, ಮುಂದಿನ 15 ದಿನಗಳ ಒಳಗೆ ಉಳಿದ ಅನುದಾನ ಬಿಡುಗಡೆಗೊಳಿಸಲಾಗುವದು ಎಂದು ಸಚಿವ ಸೀತಾರಾಂ ಹೇಳಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಸಾಮೂಹಿಕ ಸಹಭಾಗಿತ್ವದಲ್ಲಿ ದೇವಾಲಯಗಳು ನಿರ್ಮಾಣಗೊಂಡರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಪ್ರತಿಯೊಬ್ಬರು ತಮ್ಮ ಧರ್ಮವನ್ನು ಪ್ರೀತಿಸಿ, ಇನ್ನೊಂದು ಧರ್ಮವನ್ನು ಗೌರವಿಸಬೇಕು. ದೇವರು-ಗುರುಹಿರಿಯರ ಮೇಲೆ ನಂಬಿಕೆ ಭಯ ಭಕ್ತಿಯಿರಬೇಕು. ದೇವಾಲಯ, ಚರ್ಚ್, ಮಸೀದಿಗಳಿಗೆ ಭೇಟಿ ನೀಡುವದರಿಂದ ಉತ್ತಮ ಸಂಸ್ಕಾರ ದೊರಕುತ್ತದೆ. ಇವುಗಳನ್ನು ಧಿಕ್ಕರಿಸುವವರು ಸಮಾಜಕ್ಕೆ ಮಾರಕವಾಗುತ್ತಾರೆ. ನ್ಯಾಯವೇ ಧರ್ಮದ ಮೂಲವಾಗಿದ್ದು, ನ್ಯಾಯಪಾಲನೆ ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ರಿಚರ್ಡ್ ಡಿಸೋಜ ಮಾತನಾಡಿ, ಧರ್ಮ ವ್ಯಕ್ತಿತ್ವ ರೂಪಿಸುವ ಸಾಧನವಾಗಿದೆ. ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ದಾನಿಗಳಾದ ಬೆಂಗಳೂರು ಎಆರ್‍ಎಟಿ ವ್ಯವಸ್ಥಾಪಕ ನಿರ್ದೇಶಕ ಟೋನಿ ವಿನ್ಸೆಂಟ್, ಕಾಂಗ್ರೆಸ್ ಐಎನ್‍ಟಿಯುಸಿ ರಾಜ್ಯ ಕಾರ್ಯದರ್ಶಿ ನಾಪಂಡ ಮುತ್ತಪ್ಪ, ದೇವಾಲಯ ನಿರ್ಮಿಸಿದ ಕೇರಳದ ಎರ್ನಾಕುಲಂನ ಗುತ್ತಿಗೆದಾರ ಕ್ಷೇವಿಯರ್, ಮಾಣಿಯ ವರ್ಧಮಾನ್ ಜೈನ್ ಸಹೋದರರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕೊಡಗು ವಲಯ ಗುರು ಮಧಲೈ ಮುತ್ತು, ಧರ್ಮಗುರುಗಳಾದ ರಾಯಪ್ಪ, ವಿನ್ಸೆಂಟ್ ಮೊಂತೆರೋ ಸೇರಿದಂತೆ ಇತರರು ಉಪಸ್ಥಿತರಿದ್ದರು. ದೇವಾಲಯ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು.