ಸೋಮವಾರಪೇಟೆ,ಜ.25: ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿರುವ ನಿರಾಶ್ರಿತರಿಗೆ ಅಲ್ಲಿನ ಮೀಸಲು ಅರಣ್ಯದೊಳಗೆ ನಿವೇಶನ ನೀಡುವದು ಅಸಾಧ್ಯ ಎಂದು ಸ್ಪಷ್ಟಪಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸೀತಾರಾಂ, ಕೆಲವೇ ದಿನಗಳಲ್ಲಿ ಜಿಲ್ಲೆಯ ಇತರೆಡೆಯಲ್ಲಿ ನಿವೇಶನ ಕಲ್ಪಿಸಲು ಸರಕಾರ ಬದ್ಧವಾಗಿದೆ ಎಂದರು.ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತಗಳ ವತಿಯಿಂದ ಹಕ್ಕುಪತ್ರಗಳಿಗಾಗಿ 94 ಸಿ ನಮೂನೆಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

ದಿಡ್ಡಳ್ಳಿ ನಿರಾಶ್ರಿತರಿಗೆ ಮೀಸಲು ಅರಣ್ಯದಲ್ಲಿ ನಿವೇಶನ ನೀಡಲು ಕಾನೂನು ಭಾಗದಲ್ಲಿಯೂ ಅವಕಾಶವಿಲ್ಲ. ಕಾನೂನನ್ನು ಮೀರಿ ಸರ್ಕಾರ ಅಂತಹ ಕ್ರಮಕ್ಕೆ ಮುಂದಾ ಗುವದಿಲ್ಲ. ಅಲ್ಲಿನ ನಿರಾಶ್ರಿತರಿಗೆ ಜಿಲ್ಲೆಯ ಬೇರೆಡೆಗಳಲ್ಲಿ ನಿವೇಶನ ನೀಡಲಾಗುವದು. ಈಗಾಗಲೇ ನಾಲ್ಕು ಕಡೆಗಳಲ್ಲಿ ನಿವೇಶನ ಗುರುತಿಸಲಾಗಿದ್ದು, ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕಾರ್ಯೋನ್ಮುಖವಾಗಲಿದೆ ಎಂದರು.

ಯಾವದೇ ಒಂದು ಕುಟುಂಬ ಸೂರಿಲ್ಲದೆ ಇರಬಾರದೆಂಬ ನಿಟ್ಟಿನಲ್ಲಿ ಸರಕಾರ ನಿವೇಶನ ನೀಡಲು ಕಾರ್ಯಕ್ರಮ ರೂಪಿಸುತ್ತಿದೆ. ಈಗಾಗಲೆ ಸುಮಾರು 11 ಸಾವಿರಕ್ಕೂ ಅಧಿಕ ಅರ್ಜಿಗಳು 94 ಸಿ ಯಂತೆ ಬಂದಿದ್ದು, ಅವುಗಳನ್ನು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಹಕ್ಕುಪತ್ರ ನೀಡಲು ಕ್ರಮ ವಹಿಸುತ್ತಿದ್ದಾರೆ. ಇದೀಗ ಸುಮಾರು 25 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕು ಪತ್ರ ವಿತರಿಸ ಲಾಗುತ್ತಿದೆ. ಈ ಹಿಂದೆ ನಿವೇಶನದ ಫಲಾನುಭವಿಗಳೆ ಮತ್ತೆ ಫಲಾನುಭವಿ ಗಳಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು, ಅಂತಹ ಅಕ್ರಮ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ವಹಿಸಲಾಗುವದು ಎಂದು ಎಚ್ಚರಿಕೆ ನೀಡಿದರು.

ತಮಿಳುನಾಡಿನ ಜಲ್ಲಿಕಟ್ಟು ಆಚರಣೆಯ

(ಮೊದಲ ಪುಟದಿಂದ) ಹೋರಾಟಕ್ಕೆ ಜಯ ಸಿಕ್ಕಿದೆ, ಅದರಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಚರಿಸಲ್ಪಡುತ್ತಿದ್ದ ಕಂಬಳಕ್ಕೂ ಕೂಡ ಅವಕಾಶ ಕಲ್ಪಿಸಿಕೊಡಬೇಕೆಂಬದು ರಾಜ್ಯ ಸರಕಾರದ ಒತ್ತಾಸೆಯಾಗಿದೆ ಎಂದರು.

ಇಲ್ಲಿನ ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತಿದೆ ಎಂದು ತನಗೆ ಹಲವಾರು ದೂರುಗಳು ಪತ್ರ ಮುಖೇನ ಬಂದಿದ್ದು, ಜನರಿಗೆ ಸಹಕಾರವಾಗುವ ರೀತಿಯಲ್ಲಿ ಹೆಚ್ಚುವರಿ ಕೌಂಟರ್‍ಗಳನ್ನು ತೆರೆದು ಸೇವೆಗೆ ಮುಂದಾಗಿ ಎಂದು ತಹಶೀಲ್ದಾರ್‍ರಿಗೆ ಸೂಚಿಸಿದರು.

ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ತಾಲೂಕಿನಲ್ಲಿ ನಿವೇಶನ ರಹಿತರ ಸಂಖ್ಯೆ ಹೆಚ್ಚಿದ್ದು, ಅವರಿಗೆ ಹಂತ ಹಂತವಾಗಿ ನಿವೇಶನ ಹಂಚಲು ತಾಲೂಕಿನ ಕೆಲವು ಕಡೆ ಜಾಗಗಳನ್ನು ಗುರುತಿಸಲಾಗಿದೆ. ಆದರೆ ನಮ್ಮ ತಾಲೂಕಿನಲ್ಲಿ ಮೀಸಲಿಟ್ಟ ಜಾಗವನ್ನು ದಿಡ್ಡಳ್ಳಿಯ ನಿರಾಶ್ರಿತರಿಗೆ ನೀಡಲು ಯಾವದೇ ಕಾರಣಕ್ಕೂ ಬಿಡುವದಿಲ್ಲ ಎಂದು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು. ದಿಡ್ಡಳ್ಳಿ ನಿರಾಶ್ರಿತರಿಗೆ ನಿವೇಶನ ನೀಡಲು ಆ ತಾಲೂಕಿನಲ್ಲಿ ಕನ್ಸಾಲಿಡೇಟೆಡ್ ಲಿಮಿಟೆಡ್‍ನವರಲ್ಲಿ ಸರಕಾರದ ಒತ್ತುವರಿ ಜಾಗಗಳಿದ್ದು, ಅದನ್ನು ತೆರವುಗೊಳಿಸಿಕೊಂಡು ಅದನ್ನು ವಿತರಿಸಲು ಕ್ರಮಕೈಗೊಳ್ಳಿ ಎಂದು ಸಲಹೆ ನೀಡಿದರು.

ಈ ಹಿಂದೆ ರಾಜೀವ್‍ಗಾಂಧಿ ಹೌಸಿಂಗ್ ಕಾರ್ಪೋರೇಷನ್‍ನಿಂದ ನೀಡಿದ್ದ ಸುಮಾರು 178 ಹಕ್ಕುಪತ್ರಗಳಲ್ಲಿ ಹಲವರು ಮಾರಾಟ ಮಾಡಿರುವ ಬಗ್ಗೆ ದೂರುಗಳು ಬಂದಿದೆ. ನಿವೇಶನ ಪಡೆಯಲು ಒಮ್ಮೆ ಮಾತ್ರ ಅರ್ಹರಾಗಿರುತ್ತಾರೆ ಎಂದರು. ಒಮ್ಮೆ ನಿವೇಶನ ಪಡೆದು ಫಲಾನುಭವಿಗಳಾದವರ ಅರ್ಜಿಯನ್ನು ತಿರಸ್ಕರಿಸಲಾಗುವದು ಎಂದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಉಪಾಧ್ಯಕ್ಷ ಅಭಿಮನ್ಯುಕುಮಾರ್, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತಿತರು ಉಪಸ್ಥಿತರಿದ್ದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರುಗಳು, ವಿವಿಧ ಪಕ್ಷದ ಪ್ರಮುಖರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.