ಮಡಿಕೇರಿ, ಜ. 24: ಹನ್ನೆರಡನೇ ಶತಮಾನದಲ್ಲಿ ಶರಣರ ಚಳವಳಿಗಳು ಸಾಮಾಜಿಕ ಕ್ರಾಂತಿ ಉಂಟು ಮಾಡಿದರ ಪರಿಣಾಮ ಸಮಾನತೆ, ಭ್ರಾತೃತ್ವ ಬೆಳೆಯಲು ಸಾಧ್ಯವಾಯಿತು. ನಿಜಶರಣ ಅಂಬಿಗರ ಚೌಡಯ್ಯ ಸೇರಿದಂತೆ ಹಲವು ಶರಣರು 12ನೇ ಶತಮಾನದಲ್ಲಿ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ವಚನಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಆ ದಿಸೆಯಲ್ಲಿ ಶರಣರ ವಚನಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ .ರಮೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರ ವಚನ ಹಾಗೂ ಉಪದೇಶಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವದು ಅಗತ್ಯ ಎಂದು ಟಿ.ಪಿ. ರಮೇಶ್ ನುಡಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಶರಣರ ಚಳುವಳಿಯಿಂದಾಗಿ ಸಾಮಾಜಿಕ ಸಮಾನತೆ ಪರಿಕಲ್ಪನೆ ಉಂಟಾಯಿತು. ಶರಣರ ಚಳುವಳಿ ಆದರ್ಶಗಳು ಇಂದಿಗೂ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ‘ಶರಣರ ವಚನಗಳನ್ನು ಕೇಳುತ್ತಿದ್ದರೆ, ಸದಾ ಆಲಿಸಬೇಕು ಎನಿಸುತ್ತದೆ. ಶರಣರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿದರು. ಪ್ರತಿಯೊಬ್ಬರ ಬದುಕು ಉತ್ತಮಪಡಿಸಲು ಶ್ರಮಿಸಿದರು ಎಂದು ಹೇಳಿದರು.
ಉಪನ್ಯಾಸಕಿ ಡಾ. ಸುಕನ್ಯಾ ಮಾತನಾಡಿ ಶರಣರ ಸಂದೇಶಗಳು, ವಚನಗಳು ಸಾರ್ವಕಾಲಿಕ, ಶರಣರು ಸಮಾಜದ ಏಳಿಗೆಗೆ ಶ್ರಮಿಸಿದರು. ಸಮಾಜದೊಳಗಿನ ಅಸಮಾನತೆಯನ್ನು ತೊಡೆದುಹಾಕು ವಲ್ಲಿ ಶ್ರಮಿಸಿದರು. ಸಮಾಜಕ್ಕೆ ಬೆಳಕು ತರಲು ಪ್ರಯತ್ನಿಸಿದರು.
ಅಂಬಿಗರ ಚೌಡಯ್ಯ ಅವರು ಸುಮಾರು 278 ವಚನ ರಚಿಸಿದ್ದಾರೆ. ಬಸವಣ್ಣ ಅವರ ವಚನಗಳು ಸರಳವಾಗಿದ್ದರೆ, ಅಂಬಿಗರ ಚೌಡಯ್ಯ ಅವರ ವಚನಗಳು ಕಠಿಣವಾಗಿವೆ ಎಂದು ತಿಳಿಸಿದರು.
ರವಿ ಭೂತನಕಾಡು ಮತ್ತು ಷಡಕ್ಷರಿ ತಂಡದವರು ವಚನ ಗಾಯನ ಹಾಡಿದರು. ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸತ್ಯನ್, ಉಪ ಪೊಲೀಸ್ ವರಿಷ್ಠಾಧಿಕಾರಿ ಛಬ್ಬಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಳ್ಳಯ್ಯ, ನಾನಾ ಇಲಾಖೆ ಅಧಿಕಾರಿಗಳು ಇತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.