ಮಡಿಕೇರಿ, ಜ. 24: ಯುವಜನತೆ ದೇಶದ ಬೆನ್ನೆಲುಬಾಗಿದ್ದು ದೇಶದಲ್ಲಿ ಯುವಜನತೆಯ ಸಂಖ್ಯೆಯೂ ಸಾಕಷ್ಟಿದೆ. ಆದರೆ ಈ ಯುವ ಸಮೂಹವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸರಕಾರಗಳಿಂದ ಅಗತ್ಯ ಪ್ರೋತ್ಸಾಹ ಸಿಗದಿರುವದು ವಿಷಾದನೀಯ. ಕೇಂದ್ರ, ರಾಜ್ಯ ಸರಕಾರದಿಂದ ಯುವಜನತೆಗೆ ಯಾವ ಸೌಲಭ್ಯಗಳು ದೊರೆಯಬೇಕೋ ಅದು ಸಿಗುತ್ತಿಲ್ಲ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಅವರು ಅಭಿಪ್ರಾಯಪಟ್ಟರು.
ತಾಳತ್ಮನೆಯಲ್ಲಿ ನಿನ್ನೆ ನಡೆದ ನೇತಾಜಿ ಯುವಕ ಮತ್ತು ಯುವತಿ ಮಂಡಳಿಯ ಬೆಳ್ಳಿಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇತಾಜಿ ಯುವಕ-ಯುವತಿ ಮಂಡಳಿಯ ಕಾರ್ಯಚಟುವಟಿಕೆ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. 3 ದಿನ ಕಾಲ ಆಯೋಜಿಸಿದ ಕಾರ್ಯಕ್ರಮ ಅರ್ಥಪೂರ್ಣವಾಗಿ ಗಮನ ಸೆಳೆದಿದೆ ಎಂದು ಶ್ಲಾಘಿಸಿದ ಅವರು, ಇಂತಹ ಸಂಘ-ಸಂಸ್ಥೆಗಳು ಜಿಲ್ಲೆಯ ಉದ್ದಗಲಕ್ಕೂ ಬೆಳೆದು ಜಿಲ್ಲೆ ಅಭಿವೃದ್ಧಿ ಕಾಣುವಂತಾಗಲಿ ಎಂದು ಆಶಿಸಿದರು. ಉತ್ತಮ ಚಟುವಟಿಕೆ ನಡೆಸುವ ಸಂಘಗಳಿಗೆ ಅಗತ್ಯ ಸಹಕಾರವನ್ನು ಸರಕಾರ ನೀಡುವಂತಾಗಬೇಕು ಎಂದರು.
ಸೌಲಭ್ಯ ಒದಗಿಸದ ಸರಕಾರಗಳು, ಭ್ರಷ್ಟ ಅಧಿಕಾರಿಗಳ ವಿರುದ್ಧ ಯುವ ಸಂಘಗಳು ಸೆಟೆದು ನಿಲ್ಲಬೇಕು. ಇಂತಹ ಹೋರಾಟಕ್ಕೆ ಬೆಂಬಲ ಇರುವದಾಗಿ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇಂದು ಯುವಶಕ್ತಿಯು ಮನಸ್ಸು ಮಾಡಿದರೆ ಯಾವ ಕೆಲಸವನ್ನಾದರೂ ಮಾಡಲು ಸಾಧ್ಯ. ಹಾಗೇ ಈ ನೇತಾಜಿ ಸಂಘ ಸಮಾಜದ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿರುವದು ಶ್ಲಾಘನೀಯ. ಇಂದು ಯುವಜನತೆಗೆ ಸರಕಾರದಿಂದ ಅನೇಕ ಸೌಲಭ್ಯಗಳು ದೊರೆಯುತ್ತಿದ್ದು ಅದನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಯವರೆಗೆ ಕೊಂಡೊಯ್ಯುವ ಕಾರ್ಯವಾಗಬೇಕು. ಇಂದು ಈ ಸಂಸ್ಥೆಯು ಏನೇ ಸಮಸ್ಯೆ ಬಂದರೂ ಅಧಿಕಾರಿ ವರ್ಗದವರ ಬೆನ್ನತ್ತಿ ಕೆಲಸ ಮಾಡಿದರ ಪರಿಣಾಮ ಈ ಸಂಘ ಇನ್ನೂ ಉತ್ತಮವಾಗಿ ಬೆಳೆದು ಬೇರೆಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿದೆ. ಸಮಾಜದ ನಿರೀಕ್ಷೆಗೆ ಪೂರಕವಾಗಿ ಕಾರ್ಯವನ್ನು ಮಾಡಿ ಎಲ್ಲಾ ಸಂಘ-ಸಂಸ್ಥೆಗಳಿಗೂ ಅನುಕರಣೀಯ ಮತ್ತು ಆದರ್ಶಪ್ರಾಯವಾಗಿ ಬೆಳೆದು ನಿಂತಿದೆ. ಜನರಿಗೆ ಏನು ಸೌಲಭ್ಯಗಳು ಸರಕಾರದಿಂದ ದೊರೆಯುತ್ತಿದೆಯೋ ಅದನ್ನು ಒದಗಿಸಲು ಸಂಘ ನಡೆಸುತ್ತಿರುವ ಅವಿರತ ಪ್ರಯತ್ನ ನಿಂತ ನೀರಾಗದೇ ಹರಿಯುವ ನೀರಾಗಲಿ ಎಂದು ಹಾರೈಸಿದರು.
ಸಮಾರೋಪ ಭಾಷಣ ಮಾಡಿಕ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ನೇತಾಜಿ ಯುವಕ ಸಂಘ 25 ವರ್ಷಗಳಿಂದ ಸಮಾಜದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡು, ಎಲ್ಲಾ ಸಮಸ್ಯೆಗಳಿಗೆ ದನಿಯಾಗಿ ಸಮಾಜದ ಅಭ್ಯುದಯಕ್ಕೆ ಸಾಕ್ಷಿಯಾಗಿದ್ದಾರೆ. ಉತ್ತಮ ನಾಯಕತ್ವ ಗುಣವಿದ್ದರೆ ಸಂಘವನ್ನು ಉತ್ತಮವಾಗಿ ಕೊಂಡೊಯ್ಯಲು ಸಾಧ್ಯ. ಇಂದು ಈ ಸಂಘ ಜಾತ್ಯತೀತವಾಗಿ, ಪಕ್ಷಾತೀತವಾಗಿ ಸಮಾಜದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಇಂತಹ ಕಾರ್ಯವನ್ನು ಮಾಡಲು ಗಿರೀಶ್ ತಾಳತ್ಮನೆಯವರಲ್ಲಿ ಉತ್ತಮ ನಾಯಕತ್ವ ಗುಣವಿದೆ. ಈ ನಾಯಕತ್ವ ಗುಣದಿಂದಲೇ ಈ ಸಂಘ ಇಂದು ಹೆಮ್ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದರು. ನೇತಾಜಿ ಯುವಕ ಮತ್ತು ಯುವತಿ ಮಂಡಳಿಯು ತನ್ಮೂಲಕ ಹಲವು ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ ಇಂದು ಗುರುತಿಸಿಕೊಂಡಿದೆ. ಓದುಗರಿಗಾಗಿ ಗ್ರಂಥಾಲಯವನ್ನು ಕೂಡಾ ತೆರೆದಿದ್ದು, ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು. ಯಾವದೇ ಅಭಿವೃದ್ಧಿಯ ಪ್ರಶ್ನೆ ಬಂದಾಗ ರಾಜಕೀಯ ಅದರಲ್ಲಿ ಮಿಳಿತಗೊಳ್ಳುವದಿಲ್ಲ. ಬದಲಾಗಿ ಎಲ್ಲಾ ಜನಪ್ರತಿನಿಧಿಗಳು ಸಹ ಅಭಿವೃದ್ಧಿಗೆ ಬೆಂಬಲ ನೀಡುತ್ತಾರೆ. ಮುಂದೆಯೂ ಸಂಘದ ಎಲ್ಲಾ ಕಾರ್ಯಗಳಿಗೆ ಪ್ರೋತ್ಸಾಹ ನೀಡಿ ಬೆಂಬಲಿಸುತ್ತೇವೆ ಎಂದರು.
ನೆನಪಿನ ಸಂಚಿಕೆ ರಜತಪ್ರಭೆ ಮುಖಪುಟ ಅನಾವರಣ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಇಂದಿನ ಯುವಜನತೆಗೆ ಓದುವ ಅಭ್ಯಾಸ ಕಡಿಮೆಯಾಗಿದೆ. ಓದು ಅಭ್ಯಾಸ ಕಡಿಮೆಯಾದರೆ ದೈಹಿಕವಾಗಿ ಬೆಳೆಯುತ್ತಾರೆಯೇ ವಿನಃ ಮಾನಸಿಕವಾಗಿ ಬೆಳೆಯಲು ಸಾಧ್ಯವಿಲ್ಲ. ಯುವಕ-ಯುವತಿ ಮಂಡಳಿ ವತಿಯಿಂದ ಇಂದಿನ ಯುವಜನತೆ ಓದಿನಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಣೆ ನೀಡಬೇಕು. ಮಾತ್ರವಲ್ಲದೇ ಯುವಜನತೆಯನ್ನು ಸಮಾಜ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗವಹಿಸುವಂತೆ ಪ್ರೇರಣೆಯನ್ನು ನೀಡಬೇಕು ಎಂದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಈ ಸಂಘ ಹಲವು ಏಳು ಬೀಳುಗಳ ಮಧ್ಯೆ ಎಲ್ಲಾ ಸಂಘ-ಸಂಸ್ಥೆಗಳಿಗೂ ಮಾದರಿಯಾಗಿ ಬೆಳೆದಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸಂಸ್ಥೆಗಳು ಪ್ರಧಾನ ಪಾತ್ರವನ್ನು ವಹಿಸುತ್ತವೆ. ಈಗಾಗಲೇ ಸಮಾಜಮುಖಿ ಕಾರ್ಯಗಳೊಂದಿಗೆ ಬೆಳೆದ ಸಂಘದ ಕೀರ್ತಿ ನಾಡಿನೆಲ್ಲೆಡೆ ಪಸರಿಸಲಿ ಎಂದು ಆಶಿಸಿದರು. ಈ ಸಂದರ್ಭ ನೆನೆಪಿನ ಸಂಚಿಕೆಯ ಲಾಂಛನ ಮತ್ತು ವಿನ್ಯಾಸ ಮಾಡಿದ ಕಲಾವಿದರು ಮತ್ತು ಶಿಕ್ಷಕ ಬಿ.ಆರ್. ಸತೀಶ್, ಕ್ರೀಡಾಪಟು ರವೂಫ್ ಅಹಮ್ಮದ್, ಬೋಜಪ್ಪ ಅವರನ್ನು ಸನ್ಮಾನಿಸಲಾಯಿತು. ಬೆಳ್ಳಿ ಮಹೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಗಿರೀಶ್ ತಾಳತ್ಮನೆ ಪ್ರಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಮದೆ ಗ್ರಾ.ಪಂ. ಉಪಾಧ್ಯಕ್ಷೆ ಬಿ.ಎಸ್. ರತ್ನ, ಮದೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಂ. ಬೋಜಮ್ಮ, ನವೀನ್ ದೇರಳ, ಕೆ. ಸದಾನಂದ ಮತ್ತು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.