ಕುಶಾಲನಗರ, ಆ. 24: ಕೊಡಗಿನ ಧ್ವನಿಯಾಗಿರುವ ಶಕ್ತಿ ದಿನಪತ್ರಿಕೆ ಕೇವಲ ಜಿಲ್ಲೆಗೆ ಮಾತ್ರ ಸೀಮಿತವಾಗದೆ ರಾಜ್ಯಮಟ್ಟದ ಪತ್ರಿಕೆಯಾಗಿ ರೂಪುಗೊಳ್ಳಲಿ ಎನ್ನುವ ಅಭಿಪ್ರಾಯ ಗಣ್ಯರಿಂದ ಕೇಳಿಬಂದಿತು.ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ ದಿ|| ಬಿ.ಎಸ್. ಗೋಪಾಲಕೃಷ್ಣ ಅವರ 86ನೇ ಹುಟ್ಟುಹಬ್ಬ ಸಂದರ್ಭ ನಡೆದ ‘‘ಹಳೆ ಬೇರು-ಹೊಸ ಚಿಗುರು’’ ಕಾರ್ಯಕ್ರಮ ಸಂದರ್ಭ ಪಾಲ್ಗೊಂಡಿದ್ದ ಗಣ್ಯರು ಈ ಅಭಿಮತ ವ್ಯಕ್ತಪಡಿಸಿದ್ದು, ಆತ್ಮಸ್ಥೈರ್ಯದ ಮೂಲಕ ಬೆಳೆದು ನಿಂತು ನಿಷ್ಠುರ ವರದಿಗಳ ಮೂಲಕ ಜಿಲ್ಲೆಯ ಮನೆಮನೆ ಮಾತಾಗಿರುವ ಶಕ್ತಿ ದಿನಪತ್ರಿಕೆ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಗೊಂಡಿದೆ. ಕಾವೇರಿ ಸುದ್ದಿ ಸೆಂಟರ್ ಮತ್ತು ಶಕ್ತಿ ಬಳಗದ ಆಶ್ರಯದಲ್ಲಿ ಕುಶಾಲನಗರದ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಬಿ.ಎಸ್.ಗೋಪಾಲಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ನಂತರ ಆಶೀರ್ವಚನ ನೀಡಿ ಮಾತನಾಡಿ, 6 ದಶಕಗಳ ಹಿಂದೆ ಹಲವು ಏಳುಬೀಳುಗಳ ನಡುವೆ ಬಿ.ಎಸ್.ಗೋಪಾಲಕೃಷ್ಣ ಅವರು ಹುಟ್ಟುಹಾಕಿದ ಪತ್ರಿಕೆ ಅಂದಿನ ಕಾಲಘಟ್ಟದಲ್ಲಿ ಹಲವು ಸವಾಲುಗಳನ್ನು ಎದುರಿಸಿ ತೃಪ್ತಿಕರ ಬೆಳವಣಿಗೆಯೊಂದಿಗೆ ನಾಡಿನ ಅಭಿವೃದ್ಧಿಯಲ್ಲಿ ತೊಡಗಿಸಿ ಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವದೇ ಸಂದರ್ಭ ಹಣದಿಂದ ನೆಮ್ಮದಿ ಪಡೆಯಲು ಅಸಾಧ್ಯ ಎಂದ ಸ್ವಾಮೀಜಿಗಳು, ಸಂಸ್ಕøತಿ ಹಾಗೂ ಧರ್ಮದ ತಳಹದಿಯ ಮೇಲೆ ಮಾತ್ರ ಬದುಕು ಕಟ್ಟಿಕೊಳ್ಳಬಹುದು ಎಂದರು. ಯುವಪೀಳಿಗೆ ಈ ಬಗ್ಗೆ ಚಿಂತನೆ ಹರಿಸುವದರೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸುವದು ಇಂದಿನ ಆದ್ಯ ಕರ್ತವ್ಯವಾಗಿದೆ ಎಂದರು. ನಿರಂತರವಾಗಿ ಓದುವ ಹವ್ಯಾಸ ಬೆಳೆಸಿಕೊಳ್ಳುವ ಮೂಲಕ ಸಂಸ್ಕಾರವಂತರಾಗಲು ಸಾಧ್ಯ ಎಂದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ.ಅಪ್ಪಣ್ಣ ಮಾತನಾಡಿ, ಕೊಡಗು ಜಿಲ್ಲೆಯ ಜನತೆಗೆ ಶಕ್ತಿ ದಿನಪತ್ರಿಕೆ ಬೆಳಗಿನ ಉಪಹಾರದಷ್ಟೇ ಮುಖ್ಯವಾಗಿದ್ದು ಪತ್ರಿಕೆ ಜನರ ಸಂಪೂರ್ಣ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರಲ್ಲದೆ ಕಲ್ಲುಮುಳ್ಳುಗಳ ಹಾದಿ ತುಳಿದು ಮುಂದುವರೆದಿರುವ ಶಕ್ತಿ ಪತ್ರಿಕೆ ಚಿರಾಯುವಾಗಲಿ ಎಂದು ಹಾರೈಸಿದರು. ಪತ್ರಿಕೆಯ ಸ್ಥಾಪಕ ಸಂಪಾದಕರ ಸ್ಮರಣೆ ಕಾರ್ಯದಲ್ಲಿ ತೊಡಗಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಪಿ.ಚಂದ್ರಕಲಾ ಉಪಸ್ಥಿತರಿದ್ದು ಮಾತನಾಡಿ, ಶಕ್ತಿಯನ್ನು ಮುನ್ನಡೆಸುವ ಶಕ್ತಿ ಮೂರನೇ ತಲೆಮಾರಿಗೆ ದೊರಕಿರುವದು ಸಂಸತದ ವಿಷಯ ಎಂದ ಅವರು, ಗೋಪಾಲಕೃಷ್ಣ ಅವರ ಹೆಸರು ಅಜರಾಮರವಾಗಲಿ ಎಂದು ಹರಿಸಿದರು.

ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಕೇಚಪ್ಪನ ಮೋಹನ್ ಮಾತನಾಡಿ, ಜಿಲ್ಲೆಯಲ್ಲಿ ಸಾಮರಸ್ಯ ಬೆಳವಣಿಗೆಗೆ ಶಕ್ತಿ ಪೂರಕವಾಗಿ ಕಾರ್ಯನಿರ್ವ ಹಿಸುವದರೊಂದಿಗೆ ಸಾಮಾಜಿಕ ಕಳಕಳಿ ಹೊಂದಿರುವ ಮಾಧ್ಯಮವಾಗಿದೆ ಎಂದರು. ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯ ವ್ಯಕ್ತಪಡಿಸಿ, ಓದುಗರ ಕೊರತೆ ನಡುವೆ ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ಪರದಾಡುವ ಸ್ಥಿತಿ ಎದುರಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ 6 ದಶಕಗಳ ಹಿಂದೆ ಬಿ.ಎಸ್.ಗೋಪಾಲಕೃಷ್ಣ ಅವರು ಪತ್ರಿಕೆಯೊಂದಕ್ಕೆ ಬುನಾದಿ ಹಾಕಿರುವದು ಅವರ ಸಾಮಥ್ರ್ಯವನ್ನು ಎತ್ತಿ ತೋರಿಸುತ್ತದೆ ಎಂದರು. ಕೊಡಗು ಜಿಲ್ಲೆಯ ಪತ್ರಿಕೋದ್ಯಮದ ಪಿತಾಮಹ ಬಿ.ಎಸ್.ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ನೂರಾರು ಪತ್ರಕರ್ತರು ಕಾರ್ಯತತ್ಪ ರರಾಗಿರುವದನ್ನು ಕಾಣಬಹುದು ಎಂದರು. ಶಕ್ತಿ ದಿನಪತ್ರಿಕೆ ರಾಜ್ಯಮಟ್ಟದ ಪತ್ರಿಕೆಯಾಗಿ ರೂಪುಗೊಳ್ಳಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ದಿನಪತ್ರಿಕೆ ಸಂಪಾದಕ ಬಿ.ಜಿ. ಅನಂತಶಯನ ಅವರು ಮಾತನಾಡಿ, ಹಲವು ಮಜಲುಗಳನ್ನು ದಾಟಿ ಬಂದ ಪತ್ರಿಕೆ ಸತ್ಯ, ನಿಷ್ಠುರತೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಪತ್ರಿಕೆಯ ಸಂಸ್ಥಾಪಕರ ಆಶಯ ಹಾಗೂ ಮಾರ್ಗ ದರ್ಶನದಂತೆ ಜಾತಿ, ಧರ್ಮಗಳನ್ನು ಮೀರಿ ಕಾರ್ಯ ನಿರ್ವಹಿಸುತ್ತಿದೆ ಎಂದ ಅವರು ಇದರೊಂದಿಗೆ ಸಮಾಜ ಸೇವೆ ಯಲ್ಲಿಯೂ ತೊಡಗಿಸಿ ಕೊಂಡಿರು ವದಾಗಿ ತಿಳಿಸಿದರು. ಪತ್ರಿಕೆಯ ಬೆನ್ನೆಲುಬಾಗಿ ಜಿಲ್ಲೆಯಲ್ಲಿ ಓದುಗರು ಕೈಜೋಡಿಸಿದ್ದು ಪತ್ರಿಕೆಯ ಬೆಳವಣಿಗೆ ಸಾಧ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಅವರ ಸಮಕಾಲೀನರಾದ ಕುಶಾಲ ನಗರದ ಆರ್.ಎಸ್. ಕಾಶೀಪತಿ, ಕೆ.ಟಿ.ಸುಬ್ಬಯ್ಯ, ವಿ.ಎನ್.ಪ್ರಭಾಕರ್, ಕಮಲಾ ಗಣಪತಿ, ಎಂ.ಎಚ್. ನಜೀರ್ ಅಹಮ್ಮದ್ ಅವರುಗಳು ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟರು.

ಇದೇ ಸಂದರ್ಭ ಪತ್ರಿಕಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ಶಕ್ತಿ ದಿನಪತ್ರಿಕೆಯ ಆಡಳಿತ ವ್ಯವಸ್ಥಾಪಕಿ ಪ್ರಜ್ಞಾ ರಾಜೇಂದ್ರ, ಕಸ್ತೂರಿ ವಾಹಿನಿಯ ಸುದ್ದಿ ನಿರೂಪಕಿ ಸಿಂಚನಾ ಚಂದ್ರಮೋಹನ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಅನುಶ್ರೀ ಅನಂತಶಯನ ಅವರ ಪರವಾಗಿ ತಾಯಿ ಜಯಶ್ರೀ ಅನಂತಶಯನ ಅವರನ್ನು ಅಭಿನಂದಿಸಲಾಯಿತು.

ಕಳೆದ 6 ದಶಕಗಳಿಂದ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿರುವ ವಿ.ಪಿ.ಪ್ರಕಾಶ್ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವಿಸಲಾಯಿತು. ಕಾರ್ಯ ಕ್ರಮಕ್ಕೂ ಮುನ್ನ ಹಿರಿಯ ನಾಗರಿಕ ವಿ.ಎನ್.ವಸಂತಕುಮಾರ್ ಮತ್ತು ಬಳಗದ ಸದಸ್ಯರ ಮೂಲಕ ಕುಶಾಲನಗರ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು. ಈ ಸಂದರ್ಭ ಚೇಂಬರ್ ಆಫ್ ಕಾಮರ್ಸ್ ಪ್ರಮುಖರಾದ ಕೆ.ಎಸ್. ರಾಜಶೇಖರ್, ಎನ್.ಕೆ.ಮೋಹನ್ ಕುಮಾರ್, ಬಿಜೆಪಿ ನಗರಾಧ್ಯಕ್ಷ ಕೆ.ಜಿ. ಮನು, ಪ್ರಮುಖರಾದ ಎಂ.ವಿ. ನಾರಾಯಣ, ನಿಡ್ಯಮಲೆ ದಿನೇಶ್, ಎಂ.ಡಿ.ಕೃಷ್ಣಪ್ಪ, ಭಾಸ್ಕರ್ ನಾಯಕ್, ದಲಿತ ಸಂಘರ್ಷ ಸಮಿತಿ ಪ್ರಮುಖರಾದ ಹೆಚ್.ಪಿ. ಶಿವಕುಮಾರ್, ಕೆ.ಬಿ.ರಾಜು, ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ, ಕರವೇ ನಗರಾಧ್ಯಕ್ಷ ಬಿ.ಜೆ. ಅಣ್ಣಯ್ಯ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆಯ ಚಂದ್ರಶೇಖರ್, ಬಳಗದ ಸದಸ್ಯರಾದ ಡಿ.ಆರ್. ಸೋಮಶೇಖರ್, ಎ.ಪಿ. ಗಣಪತಿ, ವನಿತಾ ಚಂದ್ರಮೋಹನ್, ವಿನೋದ್, ಲತೀಶ್, ನೀಲಾ ಟಿ.ಎಲ್.ಶ್ರೀನಿವಾಸ್, ರಾಜುರೈ ಮತ್ತಿತರರು ಇದ್ದರು. ಕಾವೇರಿ ಸುದ್ದಿ ಸೆಂಟರ್ ಸಂಚಾಲಕ ಎಂ.ಎನ್. ಚಂದ್ರಮೋಹನ್ ಪ್ರಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಬಳಗದ ಸದಸ್ಯರಾದ ಕೆ.ಎಸ್.ಮೂರ್ತಿ ಸ್ವಾಗತಿಸಿದರು, ಕುಡೆಕಲ್ ಗಣೇಶ್ ಪ್ರಾರ್ಥಿಸಿದರು, ಕೆ.ಕೆ. ನಾಗರಾಜಶೆಟ್ಟಿ ವಂದಿಸಿದರು.