ವೀರಾಜಪೇಟೆ, ಆ. 16: ಜಾತ್ಯತೀತ ಮನೋಭಾವನೆ ಹೊಂದಿರುವವರು ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಮ್ ಹೇಳಿದರು. ವೀರಾಜಪೇಟೆಯ ಸಂತ ಅನ್ನಮ್ಮ ನವೀಕೃತ ದೇವಾಲಯದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಮ್ಮ ರಾಜ್ಯ ಹೆಚ್ಚು ಸೌಹಾರ್ದಯುತವಾದ ರಾಜ್ಯವಾಗಿದೆ. ರಾಜ್ಯದ ಜನರು ಉದಾರ ಮನೋಭಾವ ಹೊಂದಿದವ ರಾಗಿದ್ದಾರೆ. ನಮಗೆ ದೇವರು ನೀಡಿದ ಕಾಲಾವಧಿ ಕಡಿಮೆ. ನಾವು ಮತ್ತೊಬ್ಬರಿಗೆ ಸಹಾಯ ಮಾಡುವ ಮನೋವೃತ್ತಿಯನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಹೇಳಿದರು.
ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಚಾರಿತ್ರಿಕ ಹಿನ್ನೆಲೆ ಹೊಂದಿರುವ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಇರುವದರಿಂದ ಸಮಾಜ ಸುಭಿಕ್ಷೆಯಾಗಿ ಇರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ಧರ್ಮ ಕ್ಷೇತ್ರದ ಧರ್ಮಾಧ್ಯಕ್ಷ ಡಾ. ಅಂತೋಣಿ ವಾಳಪಿಳ್ಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಧರ್ಮಗಳು ಅದರದೇ ಆದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಧರ್ಮಗಳು ಏಕತೆಯನ್ನು ಸಾರುತ್ತವೆ ಎಂದು ಹೇಳಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಚಿಕ್ಕಮಗಳೂರು ಧರ್ಮ ಕ್ಷೇತ್ರದ ಧರ್ಮಗುರು ಡಾ. ಅಂತೋಣಿ ಸ್ವಾಮಿ, ಮೈಸೂರು ಕೇಂದ್ರದ ಧರ್ಮಗುರು ಮರಿ ಜೋಸೆಫ್, ಕೈಸ್ತ ಸನ್ಯಾಸಿನಿ ಮುಖ್ಯಸ್ಥೆ ಸಿಸ್ಟರ್ ಜೂಲಿಯಾನ ಡಿಸೋಜಾ, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಡಾ. ಆರೋಗ್ಯ ಸ್ವಾಮಿ, ಅಪಾರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಕಾಫಿ ಬೆಳೆಗಾರ ಸಿ.ಪಿ. ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ, ಮರ್ವೀನ್ ಲೋಬೋ, ಜೋಕೀಂ ರಾಡ್ರೀಗಸ್ ಮತ್ತಿತರರು ಉಪಸ್ಥಿತರಿದ್ದರು. ಚಾಲ್ರ್ಸ್ ಡಿಸೋಜಾ ಸ್ವಾಗತಿಸಿದರೆ, ಬೆನೆಡಿಕ್ಟ್ ಸಾಲ್ಡಾನ ಕಾರ್ಯಕ್ರಮ ನಿರೂಪಿಸಿದರು. ಫಾದರ್ ಮದಲೈಮುತ್ತು ವಂದಿಸಿದರು.