ಕುಶಾಲನಗರ, ಆ. 16: ಭಾನುವಾರ ಕುಶಾಲನಗರ ಸಮೀಪ ಗುಡ್ಡೆಹೊಸೂರು ಬಳಿ ನಿಗೂಢವಾಗಿ ಹತ್ಯೆಗೊಳಗಾದ ಆಟೋ ಚಾಲಕ ಹಾಗೂ ಹಿಂದೂಪರ ಸಂಘಟನೆಯ ಪ್ರಮುಖನಾದ ಪ್ರವೀಣ್ ಪೂಜಾರಿ ಪ್ರಕರಣ ಬೇಧಿಸಲು ಕೊಡಗು ಜಿಲ್ಲಾ ಪೊಲೀಸ್ ಸೇರಿದಂತೆ ನೆರೆಯ ಜಿಲ್ಲೆಗಳ ಅಧಿಕಾರಿಗಳ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಲಾಗಿದೆ. ಪೊಲೀಸರ ತಂಡ ಹಲವು ಆಯಾಮಗಳ ಆಧಾರದಲ್ಲಿ ಈ ಪ್ರಕರಣದ ತನಿಖೆ ಕೈಗೊಂಡಿದ್ದು, ಸವಾಲಾಗಿರುವ ಈ ಪ್ರಕರಣದ ಆರೋಪಿಗಳ ಪತ್ತೆಗಾಗಿ ಬಲೆಬೀಸಿದೆ.

ಭಾನುವಾರ ತಡರಾತ್ರಿಯಲ್ಲಿ ಚಾಕು ಇರಿತಕ್ಕೆ ಒಳಗಾಗಿ ತನ್ನ ಸ್ವಂತ ಆಟೋ ರಿಕ್ಷಾದಲ್ಲಿಯೇ ಬರ್ಬರ ಹತ್ಯೆಗೆ ಒಳಗಾದ ಪ್ರವೀಣ್ ಪೂಜಾರಿ (38) ಅವಿವಾಹಿತನಾಗಿದ್ದು, (ಮೊದಲ ಪುಟದಿಂದ) ಗುಡ್ಡೆಹೊಸೂರು ಬಳಿಯ ಹಾರಂಗಿ ರಸ್ತೆಯ ಬೊಳ್ಳೂರು ಗ್ರಾಮದ ನಿವಾಸಿಯಾಗಿದ್ದ. ಕಳೆದ ಹಲವು ವರ್ಷಗಳಿಂದ ಆಟೋ ಚಾಲಕನಾಗಿ ದುಡಿಯುತ್ತಿದ್ದ ಪ್ರವೀಣ್ ತನ್ನ ತಂದೆಯೊಂದಿಗೆ ಸಣ್ಣ ಗುಡಿಸಲೊಂದರಲ್ಲಿ ಜೀವನ ಸಾಗಿಸುತ್ತಿದ್ದ ನಡುವೆ ಈ ನಿಗೂಢ ಹತ್ಯೆ ನಡೆದಿರುವದು ಈ ಭಾಗದ ನಾಗರಿಕರಲ್ಲಿ ಒಂದು ರೀತಿಯ ಆತಂಕ ಮೂಡಿಸಿದೆ.

ಭಾನುವಾರ ಕುಶಾಲನಗರದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ತನ್ನ ಆಟೋದಲ್ಲಿ ಸ್ನೇಹಿತನೊಂದಿಗೆ ಗುಡ್ಡೆಹೊಸೂರು ಸಮೀಪದ ಸಿದ್ದಾಪುರ ರಸ್ತೆಯಲ್ಲಿರುವ ಬೆಟಗೇರಿಯ ಹೋಂಸ್ಟೇಗೆ ತೆರಳಿ ರಾತ್ರಿಯ ಊಟ ಪಾರ್ಸೆಲ್ ಮಾಡಿಕೊಂಡು ಹಿಂತಿರುಗುತ್ತಿದ್ದ ಸಂದರ್ಭ ಈ ಕೃತ್ಯ ನಡೆದಿದೆ ಎನ್ನುವದು ಸ್ಥಳೀಯರ ಹೇಳಿಕೆಯಾಗಿದೆ.

ಭಾನುವಾರ ರಾತ್ರಿ ಅಂದಾಜು 10 ರಿಂದ 11 ಗಂಟೆಯ ಒಳಗೆ ಈ ಘಟನೆ ಸಂಭವಿಸಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬದು ಕೂಡ ಸ್ಥಳೀಯರ ವಾದವಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಘಟನೆಯನ್ನು ಬೇಧಿಸಲು ಪೊಲೀಸರು ಹಲವು ಆಯಾಮಗಳ ಲೆಕ್ಕಾಚಾರದಲ್ಲಿ ತೊಡಗಿದ್ದು ಒಂದೆಡೆ ಪಂಜಿನ ಮೆರವಣಿಗೆಯ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆಯೇ ಎನ್ನುವದರೊಂದಿಗೆ ಇನ್ನೊಂದೆಡೆ ಪ್ರವೀಣ್ ಪೂಜಾರಿಯ ವೈಯಕ್ತಿಕ ಹಿನ್ನೆಲೆಗಳನ್ನು ಪೊಲೀಸರು ಶೋಧಿಸತೊಡಗಿದ್ದಾರೆ. ಕುಶಾಲನಗರ ದಲ್ಲಿ ಭಾನುವಾರ ನಡೆದ ಪಂಜಿನ ಮೆರವಣಿಗೆ ಸಂದರ್ಭ ಮುಖ್ಯರಸ್ತೆಯಲ್ಲಿರುವ ಅನ್ಯಕೋಮಿನ ಮಂದಿರವೊಂದಕ್ಕೆ ಕಲ್ಲುತೂರಾಟ ಪ್ರಕರಣದ ನಂತರ ಈ ನಿಗೂಢ ಹತ್ಯೆ ನಡೆದಿರುವದು ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.

ಪ್ರವೀಣ್ ಪೂಜಾರಿ ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ತನ್ನ ಪ್ರಾಬಲ್ಯದೊಂದಿಗೆ ಹಿಂದೂಪರ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದು, ಈ ಎಲ್ಲಾ ಚಟುವಟಿಕೆ ಗಳ ಬಗ್ಗೆಯೂ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಸ್ಥಳೀಯರ ಅನಿಸಿಕೆಯಂತೆ ಮೃತ ಪ್ರವೀಣ್ ಎಲ್ಲರೊಂದಿಗೂ ಅನ್ಯೋನತೆಯಿಂದ ವರ್ತಿಸುತ್ತಿದ್ದ ಬಗ್ಗೆ ನೆನಪಿಸಿಕೊಳ್ಳು ತ್ತಾರೆ. ಬೊಳ್ಳೂರು ಗ್ರಾಮದ ಚಂದಪ್ಪ ಎಂಬವರ ಏಕೈಕ ಪುತ್ರನಾಗಿರುವ ಪ್ರವೀಣ್ ಓರ್ವ ಸಹೋದರಿಯನ್ನು ಹೊಂದಿದ್ದು ಆಕೆಯ ವಿವಾಹ ನಡೆದಿದ್ದು ಇರುವ ಗುಡಿಸಲಿನಲ್ಲಿ ಪ್ರವೀಣ್ ತನ್ನ ತಂದೆಯೊಂದಿಗೆ ಜೀವಿಸುತ್ತಿದ್ದ ಎಂದು ಮೃತನ ಸಹೋದರಿಯ ಪತಿ ಮಾದಾ ಪಟ್ಟಣದ ನಿವಾಸಿ ರವಿ ಮಾಹಿತಿ ನೀಡಿದ್ದಾರೆ. ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಆಟೋದೊಂದಿಗೆ ತೆರಳುತ್ತಿದ್ದ ಮೃತ ಪ್ರವೀಣ್ ಪೂಜಾರಿ ಕೆಲವೊಮ್ಮೆ ಮನೆಗೆ ಹಿಂತಿರುಗದೆ ಬೇರೆಡೆ ವಾಸವಾಗುತ್ತಿದ್ದ ಎನ್ನುವ ಮಾಹಿತಿ ಲಭಿಸಿದ್ದು, ಈ ಬಗ್ಗೆ ಕೂಡ ಪೊಲೀಸರ ತನಿಖೆ ಮುಂದುವರೆದಿದೆ.

ತನ್ನ ಏಕೈಕ ಪುತ್ರನ ಹತ್ಯೆಯಿಂದ ವೃದ್ದ ತಂದೆ ಚಂದಪ್ಪ ಇದೀಗ ಅನಾಥರಾಗಿದ್ದಾರೆ ಎಂದು ತಿಳಿಸಿರುವ ಈ ಭಾಗದ ಗ್ರಾಮಪಂಚಾಯ್ತಿ ಸದಸ್ಯರಾದ ಪ್ರವೀಣ್, ತಕ್ಷಣ ಚಂದಪ್ಪ ಅವರ ಸಹಾಯಕ್ಕೆ ಸರಕಾರ ಸಹಕಾರ ನೀಡಬೇಕಾಗಿದೆ ಎಂದು ಮನವಿ ಮಾಡಿದ್ದಾರೆ. ಪ್ರಸಕ್ತ ವೃದ್ಧ ಚಂದಪ್ಪ ಅವರಿಗೆ ಸ್ಥಳೀಯ ಸಂಘಟನೆಗಳು ಮತ್ತಿತರರು ಸೇರಿ ಅಂದಾಜು 1 ಲಕ್ಷ ರೂ. ಗಳ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿರುವದು ಕಂಡುಬಂದಿದೆ.

ಸೋಮವಾರ ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಸ್ಥಳೀಯರಾದ ಜಿ.ಎಲ್.ನಾಗರಾಜ್, ಮಂಜುನಾಥ್, ಆಟೋ ಚಾಲಕರ ಸಂಘದ ಪ್ರಮುಖರು ಈ ನಗದನ್ನು ಅವರಿಗೆ ಹಸ್ತಾಂತರಿಸಿದ್ದಾರೆ. ಇನ್ನುಳಿದಂತೆ ಸರಕಾರದಿಂದ ಪರಿಹಾರ ನೀಡುವದಾಗಿ ಸಚಿವರು ಹಾಗೂ ಜಿಲ್ಲಾಡಳಿತ ಭರವಸೆ ನೀಡಿದೆ. ತನ್ನ ಏಕೈಕ ಪುತ್ರನನ್ನು ಕಳೆದುಕೊಂಡ ತಂದೆ ಚಂದಪ್ಪ ಪುತ್ರಿ ಮತ್ತು ಕುಟುಂಬ ಸದಸ್ಯರೊಂದಿಗೆ ಈ ನಿಗೂಢ ಹತ್ಯೆಯ ಬಗ್ಗೆ ದುಃಖ ಹಾಗೂ ಆತಂಕ ದೊಂದಿಗೆ ತನ್ನ ಗುಡಿಸಲಿನಲ್ಲಿ ಚಿಂತಾಕ್ರಾಂತರಾಗಿ ನಿಂತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ.