ಮಡಿಕೇರಿ, ಡಿ. 7: ಮಡಿಕೇರಿ ಸನಿಹದ ಇಬ್ನಿವಳವಾಡಿ ಬೋಯಿಕೇರಿಯ ಶ್ರೀ ಭದ್ರಕಾಳಿ ದೇವಾಲಯದ ಆವರಣದಲ್ಲಿ ಸ್ಥಳೀಯ ಗ್ರಾಮಸ್ಥರು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರನ್ನು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ವೀಣಾ ಅಚ್ಚಯ್ಯ ಅವರು, 1987ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದಾಗ ಇಬ್ನಿವಳವಾಡಿ ಗ್ರಾಮಸ್ಥರು ನೀಡಿದ ಸಹಕಾರವನ್ನು ಮರೆಯುವದಿಲ್ಲ. ಗ್ರಾಮದ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಸರ್ಕಾರದಿಂದ ಬರತಕ್ಕ ಅನುದಾನವನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುವದಾಗಿ ಹಾಗೂ ಶ್ರೀ ಭದ್ರಕಾಳಿ ದೇವಸ್ಥಾನದ ಅಭಿವೃದ್ಧಿಗಾಗಿ ಅನುದಾನ ಒದಗಿಸುವದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ದೇವಸ್ಥಾನದ ತಕ್ಕಮುಖ್ಯಸ್ಥರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.