ಸಿದ್ದಾಪುರ, ಡಿ. 7: ಅಪಘಾತದಲ್ಲಿ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಮಂಗವೊಂದನ್ನು ಪತ್ರಕರ್ತರು ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಸಮೀಪದ ಘಟ್ಟದಳ್ಳಿಯಲ್ಲಿ ನಡೆದಿದೆ. ಸುದ್ದಿ ನಿಮಿತ್ತ ಮಾಲ್ದಾರೆಗೆ ತೆರಳಿದ್ದ ಪತ್ರಕರ್ತರಾದ ಎ.ಎನ್. ವಾಸು, ರೆಜಿತ್ ಕುಮಾರ್ ಗುಹ್ಯ, ಆರ್. ಸುಬ್ರಮಣಿ ಹಾಗೂ ಪರಿಸರ ಪ್ರೇಮಿ ವಿಜಯ್ ಸಿದ್ದಾಪುರಕ್ಕೆ ಹಿಂತಿರುಗುವಾಗ ಘಟ್ಟದಳ್ಳದ ಕೆಸನಳ್ಳ ಸಮೀಪ ರಸ್ತೆಯಲ್ಲಿ ಮಂಗವೊಂದು ಗಾಯಗೊಂಡಿದ್ದನ್ನು ಕಂಡು ಕೂಡಲೇ ವಿಷಯವನ್ನು ವಲಯ ಅರಣ್ಯಾಧಿಕಾರಿ ಗೋಪಾಲ್ ಅವರ ಗಮನಕ್ಕೆ ತಂದಿದ್ದು, ನಂತರ ಸಿದ್ದಾಪುರ ಪಶುವೈದÀ್ಯ ಕೇಂದ್ರಕ್ಕೆ ಸಾಗಿಸಿದ್ದಾರೆ. ಮಂಗನ ತಲೆಗೆ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ಮಂಗನನ್ನು ಮಾಲ್ದಾರೆ ಮೀಸಲು ಅರಣ್ಯಕ್ಕೆ ಬಿಡಲಾಯಿತು. ಈ ಸಂದರ್ಭ ಆಟೋ ಚಾಲಕ ರಾಧಾಕೃಷ್ಣನ್, ಜೋಯ್ ಇನ್ನಿತರರು ಇದ್ದರು.