ಪೊನ್ನಂಪೇಟೆ, ಆ. 10: ವಿದ್ಯಾರ್ಥಿಗಳು ಕೇವಲ ಪುಸ್ತಕ ಮತ್ತು ಪರೀಕ್ಷೆಯಲ್ಲಿ ಅಂಕ ಗಳಿಸುವ ಸೀಮಿತ ಚೌಕಟ್ಟಿಗೆ ಮಾತ್ರ ಬದ್ಧರಾಗಬಾರದು. ಪಠ್ಯ ಚಟುವಟಿಕೆಗಳನ್ನು ಮೀರಿ ವಿಶಾಲ ಮನೋಭಾವದಿಂದ ಸಮಾಜವನ್ನು ನೋಡುವಂತಾಗಬೇಕು. ಇದಕ್ಕಾಗಿ ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಆತ್ಮವಿಶ್ವಾಸ ಹೆಚ್ಚಾಗಬೇಕು ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ಯುವ ಪ್ರಶಸ್ತಿ ಪುರಸ್ಕøತ ಎ.ಎಸ್.ಟಾಟು ಮೊಣ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.

ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2016-17ನೇ ಸಾಲಿನ ಕಾರ್ಯಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು. ಆತ್ಮ ವಿಶ್ವಾಸವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವದೇ ವಿದ್ಯಾರ್ಥಿಗಳ ಮೂಲ ಮಂತ್ರವಾಗಬೇಕು. ಇದಕ್ಕಾಗಿ ಪಠ್ಯ ಮತ್ತು ಪಠ್ಯೇತರ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪಲು ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೆ.ಟಿ ಟಿಪ್ಪು ಬಿದ್ದಪ್ಪ ಮಾತನಾಡಿ, ರಾಷ್ಟ್ರದ ಯುವ ಸಂಪತ್ತು ಭಾರತದಲ್ಲಿ ಬಳಕೆಯಾಗುವದಕ್ಕಿಂತ ಹೆಚ್ಚಾಗಿ ವಿದೇಶದಲ್ಲಿ ಬಳಕೆಯಾಗುತ್ತಿದೆ. ಇದು ರಾಷ್ಟ್ರದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಭಾರತದ ಯುವಕರ ಶಕ್ತಿಯನ್ನು ದೇಶದಲ್ಲೇ ಬಳಕೆ ಮಾಡಿಕೊಳ್ಳುವ ಬಗ್ಗೆ ಸರಕಾರ ಉನ್ನತ ಮಟ್ಟದಲ್ಲಿ ಚಿಂತಿಸಿ ವಿಶೇಷ ಯೋಜನೆಯೊಂದನ್ನು ರೂಪಿಸಿ ಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಸಿ.ಎಂ. ನಾಚಪ್ಪ ವಹಿಸಿದ್ದರು. ವೇದಿಕೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಮುಖ್ಯ ಸಂಯೋಜನಾಧಿಕಾರಿ ನಾಗರಾಜು ಉಪಸ್ಥಿತರಿದ್ದರು. ಉಪನ್ಯಾಸಕಿ ಅಂಬಿಕ ಆರಂಭದಲ್ಲಿ ಸ್ವಾಗತಿಸಿದರು.