ಮಡಿಕೇರಿ, ಆ. 10: ಜಿಲ್ಲೆಯ ರೈತರು ತೋಟಗಾರಿಕೆ ಇಲಾಖೆಯ ಕ್ಷೇತ್ರ-ಸಸ್ಯಾಗಾರದಲ್ಲಿ ವಿತರಣೆಗೆ ಲಭ್ಯವಿರುವ ಕಾಳುಮೆಣಸು ಸಸಿಗಳನ್ನು ರಿಯಾಯಿತಿ ದರದಲ್ಲಿ ಪ್ರತಿ ರೈತರಿಗೆ ಗರಿಷ್ಠ 250 ಸಸಿಗಳನ್ನು (ರೂ. 3.50 ಬೇರು ಭರಿಸಿದ ಕಾಳುಮೆಣಸು ಸಸಿಗೆ) ತಾ. 22 ರಿಂದ ವಿತರಿಸಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಆಸಕ್ತ ರೈತರು ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಗಳಿಂದ ಅರ್ಜಿ ನಮೂನೆಗಳನ್ನು ಪಡೆದು ಪಹಣಿ (ಆರ್.ಟಿ.ಸಿ) ಮತ್ತು ಗುರುತಿಗೆ ಸಂಬಂಧಿಸಿದಂತೆ ಆಧಾರ್, ಚುನಾವಣಾ ಗುರುತಿನ ಚೀಟಿ ಅಥವಾ ಇತರೆ ಅಧಿಕೃತ ಗುರುತಿನ ಚೀಟಿಗಳ ನೆರಳು ಪ್ರತಿಯೊಂದಿಗೆ ತಾ. 16 ರೊಳಗೆ ಸಂಬಂಧಿಸಿದ ತೋಟಗಾರಿಕೆ ಇಲಾಖೆ ತಾಲೂಕು ಕಚೇರಿಗಳಲ್ಲಿ ಸಲ್ಲಿಸಲು ಕೋರಿದೆ.

ಒಟ್ಟಾರೆ ಜಿಲ್ಲೆಯಲ್ಲಿ 3 ಲಕ್ಷ ಕಾಳುಮೆಣಸು ಸಸಿಗಳು ವಿತರಣೆಗೆ ಲಭ್ಯವಿದ್ದು, ಇವುಗಳನ್ನು ಹೋಬಳಿವಾರು ಗುರಿ ನಿಗದಿಪಡಿಸಿ ಅರ್ಜಿ ಆಹ್ವಾನಿಸಲಾಗಿದೆ. ಹೋಬಳಿವಾರು ನಿಗದಿಪಡಿಸಿದ ಗುರಿಗಳಿಗಿಂತ ಹೆಚ್ಚುವರಿ ಅರ್ಜಿಗಳು ಸ್ವೀಕೃತವಾದಲ್ಲಿ ಲಾಟರಿ ಮೂಲಕ ಹೋಬಳಿವಾರು ಅರ್ಹ ರೈತರನ್ನು ಆಯ್ಕೆ ಮಾಡಿ ವಿತರಿಸಲಾಗುವದು. ಅರ್ಹ ರೈತರಿಗೆ ತಾ. 22 ರಿಂದ ಸಂಬಂಧಿಸಿದ ಹೋಬಳಿಗೆ ಹತ್ತಿರವಿರುವ ತೋಟಗಾರಿಕೆ ಕ್ಷೇತ್ರ, ಸಸ್ಯಾಗಾರಗಳಿಂದ ವಿತರಿಸಲಾಗುವದು. ಈ ಬಗ್ಗೆ ರೈತರಿಗೆ ಸಸಿಗಳನ್ನು ಪಡೆಯುವ ದಿನಾಂಕ, ಸಮಯ ಮತ್ತು ಕ್ಷೇತ್ರ, ಸಸ್ಯಾಗಾರಗಳ ವಿವರಗಳನ್ನು ಆಯಾಯ ತಾಲೂಕಿನ ತೋಟಗಾರಿಕೆ ಇಲಾಖೆ ವತಿಯಿಂದ ನೀಡಲಾಗುವದು. ಹೆಚ್ಚಿನ ಮಾಹಿತಿಗೆ ಹತ್ತಿರದ ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ತೋಟಗಾರಿಕೆ ಉಪ ನಿರ್ದೇಶಕ ಬಿ.ಆರ್. ಗಿರೀಶ್ ತಿಳಿಸಿದ್ದಾರೆ.