ಮಡಿಕೇರಿ, ಜೂ. 1 : ಕೊಡಗು ಜಿಲ್ಲಾ ವಿಕಲಚೇತನರ ಸಂಘ, ಕೊಡಗು ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ, ಕೊಡಗು ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಕಲ ಚೇತನರಿಗೆ ಖಾಸಗಿ ಬಸ್‍ನಲ್ಲಿ ಶೇ. 50 ರಷ್ಟು ರಿಯಾಯಿತಿ ದರದ ಪಾಸ್ ವಿತರಿಸಲಾಯಿತು.

ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಎನ್.ಎಂ. ಜಗದೀಶ್ ರಿಯಾಯಿತಿ ದರದ ಬಸ್ ಪಾಸ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ಖಾಸಗಿ ಬಸ್‍ನಲ್ಲಿ ಪ್ರಯಾಣಿಸುವ ವಿಕಲಚೇತನರಿಗೆ ರಿಯಾಯಿತಿ ನೀಡಿದ್ದು, ರಾಜ್ಯದಲ್ಲೇ ಪ್ರಥಮವಾಗಿದೆ. ವಿಕಲ ಚೇತನರು ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಳ್ಳುವಂತೆ ಹೇಳಿದ ಅವರು ಖಾಸಗಿ ಬಸ್ ಮಾಲೀಕರ ಕಾರ್ಯವನ್ನು ಶ್ಲಾಘಿಸಿದರು.

ಕಾರ್ಯಕ್ರಮವನ್ನು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಉದ್ಘಾಟಿಸಿ ಮಾತನಾಡಿ, ವಿಕಲಚೇತನರಿಗೆ ಬಸ್ ದರದಲ್ಲಿ ಹಿಂದೆಯೂ ರಿಯಾಯಿತಿ ನೀಡಿದೆ. ಆದರೆ ಅದು ಕೆಲವೊಂದು ಕಡೆ ದುರುಪಯೋಗವಾಗುತ್ತಿತ್ತು. ಕೆಲವೊಂದು ಕಡೆ ರಿಯಾಯಿತಿ ಸಿಗುತ್ತಿರಲಿಲ್ಲ. ಇದೀಗ ಕೊಡಗು ಜಿಲ್ಲಾ ವಿಕಲಚೇತನರ ಸಂಘ ಬಸ್ ಪಾಸ್ ನೀಡಿದ್ದು, ತುಂಬಾ ಒಳ್ಳೆಯದಾಗಿದೆ. ಬಸ್‍ಗಳಲ್ಲಿ ಏನಾದರೂ ತಕರಾರು ಮಾಡಿದರೆ, ತನ್ನನ್ನು ಸಂಪರ್ಕಿಸುವಂತೆ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೇಶವ ಕಾಮತ್ ಮಾತನಾಡಿ, ವಿಕಲಚೇತನರು ಸಾಧನೆಗಳನ್ನು ಮಾಡಬೇಕು ಎಂದು ಶುಭ ಹಾರೈಸಿದರು. ಕೊಡಗು ಜಿಲ್ಲಾ ವಿಕಲಚೇತನರ ಸಂಘದ ಅಧ್ಯಕ್ಷ ಜೆ.ಎ. ಮಹೇಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.