ಸೋಮವಾರಪೇಟೆ, ಜು. 22: ತಾಲೂಕು ಪಂಚಾಯಿತಿ ವತಿಯಿಂದ ಈಗಿರುವ ಕಟ್ಟಡದ ಮುಂಭಾಗ ನೂತನವಾಗಿ ತಾ.ಪಂ. ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ರೂ. 5 ಕೋಟಿ ಅನುದಾನ ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ಹೇಳಿದರು.

ಇಲ್ಲಿನ ತಾ. ಪಂ. ಸಭಾಂಗಣದಲ್ಲಿ ನಡೆದ ಹಣಕಾಸು ಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹಲವಾರು ಇಲಾಖೆಗಳು ಈಗಲೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಎಲ್ಲಾ ಇಲಾಖೆಗಳ ಕಚೇರಿಗಳು ಒಂದೇ ಕಡೆ ಇದ್ದರೆ ಸಾರ್ವ ಜನಿಕರಿಗೂ ಅನುಕೂಲ ವಾಗಲಿದೆ. ಈ ನಿಟ್ಟಿನಲ್ಲಿ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಸಾಮಾನ್ಯ ಸಭೆ ಮತ್ತು ಸ್ಥಾಯಿ ಸಮಿತಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕಟ್ಟಡದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರುಗಳಿಗೆ ಪ್ರತ್ಯೇಕ ಕಚೇರಿ, ಸುಸಜ್ಜಿತ ಸಭಾಂಗಣ ವ್ಯವಸ್ಥೆಯನ್ನು ಕಲ್ಪಿಸಲಾಗುವದು ಎಂದರು.

ಜಿಲ್ಲಾ ಪಂಚಾಯಿತಿ ಮೂಲಕ ಹಲವೆಡೆ ಕೊಳವೆ ಬಾವಿ ತೆಗೆದಿದ್ದಾರೆ. ಆದರೆ ಕುಡಿಯಲು ನೀರು ದೊರಕುತ್ತಿಲ್ಲ. ಕೊಳವೆ ಬಾವಿ ತೆಗೆಯುವದು ರಾತ್ರಿ ಕಾರ್ಯಾ ಚರಣೆಯ ಒಂದು ದಂಧೆಯಾಗಿ ಮಾರ್ಪಟ್ಟಿದೆ. ಹಲವು ಪ್ರಭಾವಿಗಳಿಗೆ ಕಮೀಷನ್ ಮಾತ್ರ ಪಾವತಿಯಾಗುತ್ತಿವೆ. ಸಂಬಂಧಪಟ್ಟ ಅಭಿಯಂತರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.

ತಾಲೂಕಿನ ಪಶು ವೈದ್ಯಕೀಯ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇರುವದರಿಂದ ರೈತರಿಗೆ ತೊಂದರೆಯಾಗುತ್ತಿದೆ. 86 ಹುದ್ದೆಗಳು ಮಂಜೂರಾಗಿದ್ದರೂ ಕೇವಲ 47 ಹುದ್ದೆಗಳು ಮಾತ್ರ ಇದೆ. 6 ವೈದ್ಯರ ಹುದ್ದೆಗಳು ಖಾಲಿ ಇವೆ, ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳು ಸಕಾಲದಲ್ಲಿ ತಲಪಲು ವಿಳಂಬವಾಗುತ್ತಿದೆ ಎಂದು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಚಿಟ್ಟಿಯಪ್ಪ ಸಭೆಯ ಗಮನಕ್ಕೆ ತಂದರು. ಕೆಲವು ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾಯ್ದಿರಿಸಿದ ಯೋಜನೆಗಳು ಕೇವಲ ಒಬ್ಬನೇ ಫಲಾನುಭವಿಗೆ ದೊರಕುತ್ತಿದೆ. ಪರಿಶಿಷ್ಟ ಜಾತಿ ಪಂಗಡದಲ್ಲಿ ಓರ್ವ ವ್ಯಕ್ತಿ ಮತ್ತು ಆತನ ಕುಟುಂಬವೇ ಶ್ರೀಮಂತ ಫಲಾನುಭವಿಗಳಾಗುತ್ತಿದ್ದಾರೆ. ಇಂತಹ ಘಟನೆಗಳು ಹಲವಾರು ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ವ್ಯಂಗ್ಯವಾಡಿದರು.

ಹಲವು ಯೋಜನೆಗಳು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿವೆ. ತಾಲೂಕು ಪಂಚಾಯಿತಿಗೆ ಅನುದಾನ ಕಡಿಮೆ ಇದೆ. ಇದರೊಂದಿಗೆ ಅಧಿಕಾರಿಗಳು ತಾಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಸದಸ್ಯರಾದ ತಂಗಮ್ಮ, ವಿಮಲಾವತಿ, ಸುಹಾದ ಅಶ್ರಫ್ ಹೇಳಿದರು. ಜಿಲ್ಲಾ ಪಂಚಾಯಿತಿಯ ಮೂಲಕ ಕೆರೆಗಳ ಪುನಶ್ಚೇತನಕ್ಕೆ 29 ಲಕ್ಷ ಬಿಡುಗಡೆ ಮಾಡುತ್ತಿದೆ. ಆದರೆ ಈ ಹಣವೂ ಹುಣಸೆ ಹಣ್ಣನ್ನು ನೀರಿನಲ್ಲಿ ತೊಳೆದಂತಾಗುತ್ತಿದೆ. ಕೆರೆಗಳಲ್ಲಿ ಅಲ್ಪ ಸ್ವಲ್ಪ ಹೂಳನ್ನು ಎತ್ತಿ ಹಣ ಮಾಡುತ್ತಿದ್ದಾರೆ. ಇದರ ಬದಲು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ಅರಣ್ಯದ ಒಳಗೆ ಕೆರೆಯನ್ನು ತೋಡಿದರೆ ಕಾಡಾನೆಗೆ ಕುಡಿಯಲು ನೀರು ದೊರಕಿಸುವದರೊಂದಿಗೆ ನಾಡಿಗೆ ಬರುವದನ್ನು ತಪ್ಪಿಸಬಹುದು ಎಂದು ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಸಲಹೆ ನೀಡಿದರು.

ತಾಲೂಕಿನ ಹಲವಾರು ಶಾಲೆಗಳಲ್ಲಿ ಒಂದರಿಂದ ಐದನೇ ತರಗತಿಯವರೆಗೆ ಒಬ್ಬನೇ ಶಿಕ್ಷಕ ಪಾಠ ಮಾಡುತ್ತಿದ್ದಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಲು ಹೇಗೆ ಸಾಧ್ಯ? ಹಲವಾರು ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ, ಮತ್ತು ಪಿಯುಸಿ, ಇನ್ನು ಕೆಲವೆಡೆ ಪದವೀಧರರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಇದಕ್ಕೆ ಯಾವದೇ ಮಾನದಂಡವಿಲ್ಲವೇ? ಎಂದು ಸದಸ್ಯರಾದ ಮಣಿ ಉತ್ತಪ್ಪ ಮತ್ತು ತಂಗಮ್ಮ ಪ್ರಶ್ನಿಸಿದರು.

ಇಲಾಖಾಧಿಕಾರಿಗಳು ತಿಂಗಳ ಅಂತ್ಯದವರೆಗೆ ಇರುವ ಖರ್ಚು ವೆಚ್ಚಗಳ ಪ್ರಗತಿ ವರದಿಯನ್ನು ಸಭೆಗೆ ಒಂದು ವಾರ ಮುಂಚಿತವಾಗಿ ನೀಡಬೇಕೆಂದು ಸೂಚನೆ ನೀಡಿದ್ದರೂ ಅಧಿಕಾರಿಗಳು ಅದನ್ನು ಪಾಲಿಸುತ್ತಿಲ್ಲ ಎಂದು ಅಧ್ಯಕ್ಷರು ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರಿಗೆ ಹೇಳಿದರು. ಸಭೆಯಲ್ಲಿ ಸ್ಥಾಯಿ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.