ಗೌಹಾತಿ, ಜೂ. 15: ವನ್ಯ ಸಂಪತ್ತನ್ನು ರಕ್ಷಿಸಲು ನೇಮಕಗೊಂಡ ಹಿರಿಯ ಅಧಿಕಾರಿಯೊಬ್ಬ ಅಕ್ರಮಿಗಳೊಂದಿಗೆ ಶಾಮೀಲಾಗಿ ಅರಣ್ಯ ಸಂಪತ್ತನ್ನು ಲೂಟಿ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ. ಐಎಫ್‍ಎಸ್ ದರ್ಜೆಯ ಅಧಿಕಾರಿಯೊಬ್ಬ ವನ್ಯ ಸಂಪತ್ತಿನ ಲೂಟಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವದು ದೇಶದಲ್ಲೇ ಪ್ರಥಮ ಎನ್ನಲಾಗಿದೆ.

ಉತ್ತರ ಅಸ್ಸಾಂನ ಧೆಮಾಜಿ ಜಿಲ್ಲೆಯ ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್‍ಓ) ಮಹಂತ್ ಚಂದ್ರ ತಾಲುಕ್‍ದಾರ್ ಎಂಬ ಅಧಿಕಾರಿಯ ಅಧಿಕೃತ ನಿವಾಸದ ಮೇಲೆ ಮಂಗಳವಾರ ಧಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ರೂ. 62 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಈ ಅಧಿಕಾರಿಯ ಖಾಸಗಿ ನಿವಾಸದಿಂದ ಸುಮಾರು ಎರಡು ಕೋಟಿ ರೂಪಾಯಿ ನಗದು ಮತ್ತು ಒಂದು ಕೆ.ಜಿ.ಗೂ ಅಧಿಕ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಈ ಅಧಿಕಾರಿಯ ಮನೆಯಿಂದ 4 ಲಕ್ಷ ರೂಪಾಯಿಗಳಿಗೂ ಅಧಿಕ ಮೌಲ್ಯದ ಹುಲಿ ಚರ್ಮ, ಜಿಂಕೆ ಚರ್ಮ ಮತ್ತು ಆನೆ ದಂತದ ತುಂಡನ್ನೂ ವಶಪಡಿಸಿಕೊಳ್ಳಲಾಗಿದೆ.

ಸೋಮವಾರ ಮೂವರು ಮರಳು ಸಾಗಾಟದ ವ್ಯಾಪಾರಿಯೊಬ್ಬನಿಂದ 30 ಸಾವಿರ ರೂಪಾಯಿ ಲಂಚ ಪಡೆಯುವ ಸಂದರ್ಭ ಧಾಳಿ ನಡೆಸಿದ ನಿಗ್ರಹ ದಳದ ಅಧಿಕಾರಿಗಳು ಹಣದ ಸಮೇತ ಬಂಧಿಸಿದ್ದು ಮಂಗಳವಾರ ಈತನ ಮನೆಗಳ ಮೇಲೆ ಧಾಳಿ ನಡೆಸಿದಾಗ ಈ ಬೃಹತ್ ಭ್ರಷ್ಟಾಚಾರದ ಹಣ ಪತ್ತೆಯಾಗಿದೆ. ಕರೆನ್ಸಿ ನೋಟುಗಳ ಬಂಡಲ್‍ಗಳನ್ನು ಮನೆಯ ವಾರ್ಡ್ ರೋಬ್, ಹಾಸಿಗೆ ಕೆಳಭಾಗವಷ್ಟೇ ಅಲ್ಲದೆ ಅಡುಗೆ ಮನೆಯ ಅಕ್ಕಿ ಡಬ್ಬದಲ್ಲೂ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಅಧಿಕಾರಿಯಿಂದ ವಶಪಡಿಸಿಕೊಳ್ಳಲಾದ ಎರಡು ಕೋಟಿ ರೂಪಾಯಿ ಹಣವನ್ನು ವಿವಿಧ ಬ್ಯಾಂಕ್‍ಗಳ ಎಲೆಕ್ಟ್ರಾನಿಕ್ ಲಾಕರ್‍ನಲ್ಲಿ ಅಡಗಿಸಿಡಲಾಗಿತ್ತು. ಮನೆಯಲ್ಲಿ ಸುಮಾರು 13 ಬ್ಯಾಂಕ್ ಪಾಸ್‍ಬುಕ್‍ಗಳೂ ಪತ್ತೆಯಾಗಿವೆ. ಮೂಲಗಳ ಪ್ರಕಾರ ಈ ಅಧಿಕಾರಿಯು ಗೌಹಾತಿ ಮತ್ತು ಅಸ್ಸಾಂನ ಪೂರ್ವ ಭಾಗದ ನಾಲ್ಭರಿ ಜಿಲ್ಲೆಯ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ತೊಡಗಿಸಿರುವದಾಗಿ ತಿಳಿದುಬಂದಿದೆ.

ಈ ಅಧಿಕಾರಿಯು ದೇಶದ ಪ್ರಸಿದ್ಧ ಖಾಜಿರಂಗ ರಾಷ್ಟ್ರೀಯ ಉದ್ಯಾನವನದ ಮುಖ್ಯಸ್ಥನಾಗಿ 1989 ರಿಂದ 1993 ರವರೆಗೆ ಸೇವೆ ಸಲ್ಲಿಸಿದ್ದು, ಈ ಅವಧಿಯಲ್ಲಿ 89 ಘೇಂಡಾ ಮೃಗಗಳ ಹತ್ಯೆ ನಡೆದಿತ್ತು. ಘೇಂಡಾ ಮೃಗಗಳು ವಿನಾಶದಂಚಿನಲ್ಲಿರುವ ವನ್ಯ ಜೀವಿಗಳಾಗಿದ್ದು ಇವುಗಳ ಕೊಂಬು ಒಂದಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಬೆಲೆ ಇದೆ. ಇವುಗಳಿರುವ ಅರಣ್ಯಗಳಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಭದ್ರತೆ ನೀಡಿದ್ದು ಕಳ್ಳ ಬೇಟೆಗಾರರಿಂದ ಇವನ್ನು ಕಾಪಾಡುವದು ಸವಾಲು ಆಗಿದೆ. ಬಂಧಿತನಾಗಿರುವ ಅಧಿಕಾರಿ ಕಳ್ಳ ಬೇಟೆಗಾರರೊಂದಿಗೆ ಕೈ ಜೋಡಿಸಿ ಅಪಾರ ಪ್ರಮಾಣದ ಹಣಗಳಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ನ್ಯಾಯಾಲಯ ಈ ಅಧಿಕಾರಿಯನ್ನು ತನಿಖೆಗಾಗಿ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಈ ಕಳಂಕಿತ ಅಧಿಕಾರಿ ಮುಂದಿನ ಮಾರ್ಚ್ ತಿಂಗಳಿನಲ್ಲಿ ನಿವೃತ್ತಿಯಾಗಬೇಕಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೊನೊವಲ್ ಅವರು ತಮ್ಮ ಸರ್ಕಾರ ಯಾವದೇ ಭ್ರಷ್ಟಾಚಾರವನ್ನು ಸಹಿಸುವದಿಲ್ಲ ಎಂದು ಹೇಳಿದರಲ್ಲದೆ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ರಾಜ್ಯ ಅರಣ್ಯ ಮಂತ್ರಿ ಪ್ರಮೀಳಾ ರಾಣಿ ಬ್ರಹ್ಮ ಅವರು ಬಂಧಿಸಲಾಗಿರುವ ಅರಣ್ಯ ಅಧಿಕಾರಿಯನ್ನು ಅಮಾನತ್ತು ಮಾಡಲಾಗಿದ್ದು ಕಠಿಣ ಕ್ರಮ ಜರುಗಿಸುವದಾಗಿ ಹೇಳಿದರು.

ಸೋಮವಾರ ಗೌಹಾತಿ ಹೈ ಕೋರ್ಟು ವನ್ಯ ಜೀವಿ ಸಂರಕ್ಷಣಾ ಕಾಯ್ದೆ 1972 ಕ್ಕೆ ತಿದ್ದುಪಡಿ ತಂದು ಈ ಕಾಯ್ದೆಯನ್ವಯ ಪೊಲೀಸರಿಗೂ ಛಾರ್ಜ್ ಶೀಟ್ ಸಲ್ಲಿಸುವ ಅಧಿಕಾರ ನೀಡಬೇಕೆಂದು ಹೇಳಿದೆ. ಪ್ರಸ್ತುತ ಅರಣ್ಯಾಧಿಕಾರಿಗಳು ಮಾತ್ರ ಈ ಕಾಯ್ದೆಯನ್ವಯ ಛಾರ್ಜ್ ಶೀಟ್ ಸಲ್ಲಿಸಲು ಅಧಿಕಾರವಿದೆ. - ಇಂದ್ರೇಶ್