ಸೋಮವಾರಪೇಟೆ, ಅ. 19: ಯುವ ಜನಾಂಗ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಡಿಕೇರಿ ತಾಲೂಕು ಯುವ ಒಕ್ಕೂಟ ಅಧ್ಯಕ್ಷ ನವೀನ್ ದೇರಳ ಅಭಿಪ್ರಾಯಿಸಿದರು.

ಸೋಮವಾರಪೇಟೆ ತಾಲೂಕು ಯುವ ಒಕ್ಕೂಟದ ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಆಯೋಜಿಸಲಾಗಿದ್ದ ಯುವ ಸಂಪರ್ಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಯುವಕ ಸಂಘಗಳು ಸಮಾಜದ ಬೇಕು ಬೇಡಿಕೆಗಳನ್ನು ಮನದಟ್ಟು ಮಾಡಿಕೊಂಡು ಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಎನ್.ಎಂ. ದಿವಾಕರ್ ಮಾತನಾಡಿ, ಏನನ್ನಾದರೂ ಸಾಧಿಸಬೇಕೆಂಬ ಛಲ ಇದ್ದರೆ ಸಾಧನೆಯ ಮೆಟ್ಟಿಲು ಏರಬಹುದು. ಯುವಕರಿಗೆ ಸಾಧಿಸುವ ಗುರಿ, ದೃಢ ನಿರ್ಧಾರ, ಆತ್ಮ ವಿಶ್ವಾಸ ಇರಬೇಕು ಎಂದರು.

ವೇದಿಕೆಯಲ್ಲಿ ಯುವ ಒಕ್ಕೂಟದ ಪದಾಧಿಕಾರಿಗಳಾದ ಪಿ.ಪಿ. ಸುಕುಮಾರ್, ಮೀರಾ ರಾಜೇಂದ್ರ, ವೀಣಾ ಮಂಜಪ್ಪ, ರಮೇಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.