ಮಡಿಕೇರಿ, ಜೂ. 24: ಮಡಿಕೇರಿಯಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲೊಂದು ಕರಾಮತ್ತು ಸದ್ದು ಗದ್ದಲವಿಲ್ಲದೆ ನಡೆಯುತ್ತಿದೆಯಂತೆ.
ಯಾರೋ ಅಧಿಕಾರಿಯ ಆಸನದಲ್ಲಿ ಕೂರಲು ನಿಯಮಾನುಸಾರ ಅವಕಾಶ ಇಲ್ಲದಿರುವ ಮತ್ತೊಬ್ಬ ಅಧಿಕಾರಿ ಆಸೀನರಾಗುತ್ತಿದ್ದಾರಂತೆ. ಇಷ್ಟಕ್ಕೂ ಕೂರುತ್ತಿರುವ ಅಧಿಕಾರಿ ಹೆಚ್.ಡಿ. ಕೋಟೆಗೆ ವರ್ಗಾವಣೆಯಾಗಿದ್ದು, ಜೂನ್ 10 ರಂದೇ ಇಲ್ಲಿಂದ ರಿಲೀವ್ ಬೇರೆ ಆಗಿದ್ದಾರೆ.
ಡಿ.ಎಚ್.ಓ ಕಚೇರಿ ಅಧೀನದ ಎ.ಓ. ಕಚೇರಿ (ಅಸಿಸ್ಟೆಂಟ್ ಎಡ್ಮಿನಿಸ್ಟ್ರೇಟಿವ್ ಆಫೀಸರ್)ಯಲ್ಲಿ ಇದು ಕಂಡು ಬರುತ್ತಿದೆ. ಎ.ಓ. ಸ್ಥಾನದಲ್ಲಿರುವ ಅಧಿಕಾರಿ ಅಂಬಿಗೆರೆ ಎಂಬವರು 10 ದಿನ ರಜೆಯಲ್ಲಿ ತೆರಳಿದ್ದಾರೆ. ಈ ಸಂದರ್ಭ ಅವರು ಚಾರ್ಜ್ ನೀಡಿರುವದು ಪ್ರಸ್ತುತ ಸೂಪರಿಂಟೆಂಡೆಂಟ್ ಆಗಿರುವ ರಮೇಶ್ ಎಂಬವರಿಗೆ ಈ ತನಕ ಸೂಪರಿಂಟೆಂಡೆಂಟ್ ಆಗಿದ್ದ ಲಿಂಗರಾಜ್ ಎಂಬವರು ಹೆಚ್.ಡಿ. ಕೋಟೆಗೆ ವರ್ಗವಾಗಿದ್ದು, ನಂತರ ಎ.ಓ. ಆಗಿ ಬಡ್ತಿ ಹೊಂದಿದ್ದಾರೆ. ಜೂನ್ 10 ರಂದೇ ಲಿಂಗರಾಜ್ ಇಲ್ಲಿಂದ ರಿಲೀವ್ ಆಗಿದ್ದು, ಅಲ್ಲಿ ವರದಿ ಮಾಡಿಕೊಂಡಿದ್ದಾರೆ. ಬಳಿಕ 15 ದಿನ ರಜೆ ಹಾಕಿದ್ದು, ಇವರು ಬಾಕಿ ಕೆಲಸ ಮುಗಿಸಿ ಬರುವದಾಗಿ ಮತ್ತೆ ಮಡಿಕೇರಿಗೆ ಆಗಮಿಸಿದ್ದಾರೆ.
ವರ್ಷದ ಹಿಂದೊಮ್ಮೆ ಎ.ಓ. ರಜೆ ಹಾಕಿದ್ದ ಸಂದರ್ಭ ಆಗ ಸೂಪರಿಂಟೆಂಡೆಂಟ್ ಆಗಿದ್ದ ಲಿಂಗರಾಜ್ ಪ್ರಬಾರ ಅಧಿಕಾರಿಯಾಗಿದ್ದು, ನಾಮಫಲಕದಲ್ಲಿ ಪ್ರಬಾರ ಎಂಬ ಹೆಸರೂ ಇದೆ. ಆದರೆ ಪ್ರಸ್ತುತ ಎ.ಓ. ಅಂಬಿಗೆರೆ ಚಾರ್ಜ್ ನೀಡಿರುವದು ಈಗಿನ ಸೂಪರಿಂಟೆಂಡೆಂಟ್ ರಮೇಶ್ ಅವರಿಗೆ ಹೀಗಿದ್ದರೂ ವರ್ಗವಾಗಿರುವ ಲಿಂಗರಾಜ್ ಅವರು ಮಡಿಕೇರಿಯಲ್ಲಿ ಕೂತಿರುವದೇಕೆ ಎನ್ನುವದು ಪ್ರಶ್ನೆ. ಅವರ ಬಾಕಿ ಕೆಲಸಗಳೇನಿದ್ದರೂ ಜೂನ್ 10ಕ್ಕೆ ಮುಂಚಿತದ್ದು ಮಾತ್ರ. ಅಲ್ಲದೇ ಯಾವದೇ ರೀತಿಯಲ್ಲೂ ಎ.ಓ. ಚೇರ್ನಲ್ಲಿ ಇವರು ಕೂರುವಂತಿಲ್ಲ. ಆದರೆ ದಿನಂಪ್ರತಿ ಈ ಚೇರ್ನಲ್ಲಿ ಕುಳಿತು ಕಂಪ್ಯೂಟರ್ ಮುಂದೆ ಬಿಜಿಯಾಗಿರುತ್ತಾರಂತೆ.
ಮೂಲಗಳ ಪ್ರಕಾರ ಆರೋಗ್ಯ ಇಲಾಖೆಯ ವೇತನ, ಎರಿಯರ್ಸ್ ಮತ್ತಿತರ ಎಲ್ಲಾ ವಿಚಾರಗಳು ಈಗ ಆನ್ಲೈನ್ ಮೂಲಕ ಹ್ಯೂಮನ್ ರಿಸೋರ್ಸ್ ಮೇನೇಜ್ಮೆಂಟ್ ಸರ್ವೀಸ್ (ಊ.ಖ.ಒ.S.) ನಂತೆ ನಡೆಯಬೇಕಿದೆ. ಬಹುತೇಕರಿಗೆ ಇದು ದಿಢೀರಾಗಿ ಕಷ್ಟಸಾಧ್ಯ. ಇದು ಅರಿವಿರುವ ಇವರಿಗೆ ‘ಸಮೃದ್ಧ’ವಾದ ಒಂದು ಅವಕಾಶವಂತೆ. ಈ ಹಿನ್ನೆಲೆಯಲ್ಲಿ ಅವರು ಮಡಿಕೇರಿಯ ನಂಟು ಬಿಡುತ್ತಿಲ್ಲ ಎಂಬ ಗುಸು-ಗುಸು ಕೇಳಿಬರುತ್ತಿದೆ.