ಪೊನ್ನಂಪೇಟೆ, ಜೂ. 24: ಆರೋಪ ಪ್ರತ್ಯಾರೋಪಗಳಿಂದ ವಿವಾದಕ್ಕೊಳಗಾಗಿದ್ದ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೀರಾಜಪೇಟೆ ತಾ.ಪಂ. ಅಧ್ಯಕ್ಷ, ಉಪಾಧ್ಯಕ್ಷರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಕಾನೂರು ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯಲ್ಲಿ ಯಾವದೇ ಅವ್ಯವಹಾರ ನಡೆಯದಿರುವದು ದೃಢಪಟ್ಟಿತು. ಆದರೆ ಆರೋಗ್ಯ ಕೇಂದ್ರದ ಆಡಳಿತಾತ್ಮಕ ವ್ಯವಹಾರದಲ್ಲಿ ಹಣ ದುರುಪಯೋಗವಾಗಿರುವದು ಮೇಲ್ನೋಟಕ್ಕೆ ಸಾಬೀತಾಗಿರುವದಾಗಿ ಖಚಿತಪಡಿಸಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಈ ಹಣ ದುರುಪಯೋಗ ಪ್ರಕರಣಕ್ಕೂ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೂ ಯಾವದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾನೂರು ಆರೋಗ್ಯ ಕೇಂದ್ರದ ಸಭಾ ಭವನದಲ್ಲ್ಲಿ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಕಾನೂರು ಗ್ರಾ.ಪಂ.ನ ಸದಸ್ಯರಾದ ಕೆ.ಆರ್. ಸುರೇಶ್, ಕಡೇಮಾಡ ಭರತ್ ಮಾಚಯ್ಯ ಮತ್ತಿತರರು, ಆರೋಗ್ಯ ಕೇಂದ್ರದ ಅವ್ಯವಹಾರದ ಬಗ್ಗೆ ವಾಸ್ತವ ಪತ್ತೆ ಹಚ್ಚಿ ಬಹಿರಂಗ ಪಡಿಸುವದರ ಮೂಲಕ ಪತ್ರಿಕೆಗಳಲ್ಲಿ ಬರುತ್ತಿರುವ ಆರೋಪ-ಪ್ರತ್ಯಾರೋಪಗಳಿಗೆ ಅಂತ್ಯ ಹಾಡಿ ಆರೋಗ್ಯ ಕೇಂದ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವಂತೆ ಆಗ್ರಹಿಸಿದರು. ಇದೇ ವೇಳೆ ಕಾನೂರು ಆರೋಗ್ರ ಕೇಂದ್ರದ ವೈದ್ಯಾಧಿಕಾರಿ ವಿರುದ್ಧ ಆರೋಪಗಳ ಸುರಿಮಳೆಗೈದ ಗ್ರಾ.ಪಂ. ಕೆಲ ಸದಸ್ಯರು ಹಾಗೂ ಕೆಲ ನಾಗರಿಕರು ಅವರ ಕಾರ್ಯವೈಖರಿಯ ಬಗ್ಗೆ ತಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಭೆ ಆರಂಭದಲ್ಲಿ ಮಾತನಾಡಿದ ಕಾನೂರು ಗ್ರಾ.ಪಂ. ಸದಸ್ಯರಾದ ಕೆ.ಆರ್. ಸುರೇಶ್, ಕಳೆದ ಕೆಲವು ಸಮಯಗಳಿಂದ ಕಾನೂರು ಆರೋಗ್ಯ ಕೇಂದ್ರದ ಆಡಳಿತ ನಿರ್ವಹಣೆ ಸಮರ್ಪಕವಾಗಿಲ್ಲ. ಸ್ಥಳೀಯ ವೈದ್ಯಾಧಿಕಾರಿಗಳು ಗ್ರಾ.ಪಂ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಕೋಟ್ಯಾಂತರ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದರೂ ಅದನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗದ ಕಾರಣ ಆಸ್ಪತ್ರೆ ಸುತ್ತ ಕಾಡು ಬೆಳೆದಿದೆ. ಜನಪ್ರತಿನಿಧಿಗಳೊಂದಿಗೆ ಕನಿಷ್ಟ ಸೌಜನ್ಯ ತೋರುವ ಪ್ರವೃತ್ತಿಯೂ ಸ್ಥಳೀಯ ವೈದ್ಯಾಧಿಕಾರಿಗಳಿಗಿಲ್ಲ ಎಂದು ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿ ಮಾತನಾಡಿದ ಸ್ಥಳೀಯ ಪ್ರಮುಖರಾದ ಅಳಮೇಂಗಡ ವಿವೇಕ್ ಮತ್ತು ಕೋದೇಂಗಡ ನರು, ಮಚ್ಚಮಡ ಕಂದಾ ಭೀಮಯ್ಯ ಮೊದಲಾದವರು ಸ್ಥಳೀಯ ವೈದ್ಯಾಧಿಕಾರಿಗಳ ಕಾರ್ಯಪ್ರವೃತ್ತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಮಜಾಯಿಸಿಕೆ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಸ್ಥಳೀಯ ವೈದ್ಯಾಧಿಕಾರಿಗಳು ಇತ್ತೀಚೆಗಷ್ಟೆ ಸೇವೆಗೆ ಸೇರ್ಪಡೆಗೊಂಡಿದ್ದಾರೆ. ಅವರಿಗೆ ಅನುಭವದ ಕೊರತೆ ಇದ್ದು, ಈ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸದಸ್ಯರನ್ನು ಸಮಾಧಾನಪಡಿಸಿದರು.

ಬಳಿಕ ಅಧಿಕಾರಿಗಳೊಂದಿಗೆ ಹಾಗೂ ಕಾನೂರು ಗ್ರಾ.ಪಂ. ಸದಸ್ಯರೊಡಗೂಡಿ ಸಭೆ ಮುಂದುವರಿಸಿದ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಮತ್ತು ಉಪಾಧ್ಯಕ್ಷರಾದ ನೆಲ್ಲಿರ ಚಲನ್ ಕುಮಾರ್, ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರವನ್ನು ಪತ್ತೆ ಹಚ್ಚಲು ಸಭೆಯಲ್ಲಿಯೇ ದಾಖಲೆ ಪರಿಶೀಲಿಸಿ ಸ್ಥಳದಲ್ಲಿಯೇ ವರದಿ ನೀಡುವಂತೆ ಸೂಚಿಸಿದರು.

ಈ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಿರಣ್ ರಾಯ್ ಪಡ್ನೇಕರ್ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ ಅವರ ಸಮ್ಮುಖದಲ್ಲಿ ತಾ.ಪಂ. ಲೆಕ್ಕಾಧಿಕಾರಿಗಳಾದ ಡಾಲಿ ಅವರು ಆರೋಗ್ಯ ಕೇಂದ್ರದ ಲೆಕ್ಕ ಪತ್ರದ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿದರು. ಬಳಿಕ ಮತ್ತೆ ಸಭೆ ಸೇರಿದಾಗ ಪರಿಶೀಲನಾ ವರದಿಯನ್ನು ಸಭೆಗೆ ಮಂಡಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್, ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಲೆಕ್ಕಪತ್ರಗಳು ಎಲ್ಲವೂ ಪಾರದರ್ಶಕವಾಗಿದ್ದು, ಯಾವದೇ ಅವ್ಯವಹಾರ ನಡೆದಿರುವದಿಲ್ಲ ಎಂದು ಸ್ಪಷ್ಟಪಡಿಸಿದರು. ಸಮಿತಿಗೆ ಒಟ್ಟು ರೂ. 155944.00 ಮೊತ್ತದ ಎ.ಆರ್.ಎಸ್. ಅನುದಾನ ಬಂದಿದ್ದು, ಈ ಪೈಕಿ ಒಟ್ಟು ರೂ. 156091.00 ಮೊತ್ತ ಆಸ್ಪತ್ರೆಗೆ ಸಂಬಂಧಿಸಿದಂತೆ ಖರ್ಚಾಗಿರುವದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ಇದೀಗ ಸಮಿತಿಯ ಖಾತೆಯಲ್ಲಿ ರೂ. 2783.00 ಮೊತ್ತ ಬಾಕಿ ಇರುವದಾಗಿ ಸಭೆಗೆ ಮಾಹಿತಿ ನೀಡಿದರು.

ಆಸ್ಪತ್ರೆಯ ಆಡಳಿತ ವಿಭಾಗದಲ್ಲಿ ಹಣ ದುರುಪಯೋಗವಾಗಿರುವದು ಈಗಾಗಲೇ ಬೆಳಕಿಗೆ ಬಂದಿರುತ್ತದೆ. ಆಸ್ಪತ್ರೆಯ ಗುಮಾಸ್ತ ಹುದ್ದೆಯನ್ನು ಹೆಚ್ಚುವರಿಯಾಗಿ ನಿರ್ವಹಿಸುವ ಪುರುಷ ಆರೋಗ್ಯ ಸಹಾಯಕರೊಬ್ಬರು ಕಳೆದ 2015 ನವೆಂಬರ್‍ನಿಂದ 2016 ಫೆಬ್ರವರಿವರೆಗೆ ರೂ. 326817.00 ಮೊತ್ತದ ಸಿಬ್ಬಂದಿಗಳ ವೇತನವನ್ನು ತಮ್ಮ ಖಾತೆಗೆ ಜಮಾವಣೆ ಮಾಡಿಕೊಂಡಿದ್ದರು. ಇದು ಬೆಳಕಿಗೆ ಬಂದ ಕೂಡೆಲೇ ಈ ಹಣವನ್ನು ಇವರು ಆಸ್ಪತ್ರೆಯ ಖಾತೆಗೆ ಜಮಾ ಮಾಡಿದ್ದಾರೆ. ಆದರೂ ಇವರು ಮಾಡಿರುವ ಈ ಅಪರಾಧವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಈಗಾಗಲೇ ಲೆಕ್ಕ ಪರಿಶೋಧನೆ ನಡೆಸಿ ಜಿಲ್ಲಾ ಆರೋಗ್ಯಾಧಿಕಾರಿಗೆ ವರದಿ ಸಲ್ಲಿಸಿದೆ. ತಪ್ಪಿತಸ್ಥ ಈ ಸಹಾಯಕರ ವಿರುದ್ಧ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಕ್ತ ಇಲಾಖಾ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಭೆಯಲ್ಲಿ ವಿವರಿಸಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷೆ ಡಿ.ಸಿ. ಲಲಿತ ಕುಮಾರಿ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ಮಾಡಿದ ಹುರುಳಿಲ್ಲದ ಆರೋಪಗಳ ಬಗ್ಗೆ ಪ್ರಸ್ತಾಪಿಸಿ, ಈ ಸಭೆಯಿಂದಾಗಿ ಸತ್ಯಾಂಶ ಹೊರಬಿದ್ದಿದೆ ಎಂದು ಸಮಾಧಾನ ಪಟ್ಟುಕೊಂಡರು.

ಸಭೆಯಲ್ಲಿ ಗ್ರಾ.ಪಂ. ಸದಸ್ಯ ಕೆ.ಆರ್. ಸುರೇಶ್ ಮತ್ತೆ ಆರೋಪ ಮುಂದುವರಿಸಿ ಈ ಎಲ್ಲಾ ಗೊಂದಲಗಳಿಗೆ ಸ್ಥಳೀಯ ವೈದ್ಯಾಧಿಕಾರಿಗಳೇ ನೇರ ಕಾರಣ ಎಂದು ಹೇಳಿದಾಗ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗ್ರಾ.ಪಂ.ನ ಮತ್ತೋರ್ವ ಸದಸ್ಯ ಸುಳ್ಳಿಮಾಡ ದೀಪಕ್, ವೈದ್ಯಾಧಿಕಾರಿಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡಬಾರದು. ಕಳೆದ ಆರು ತಿಂಗಳಿನಿಂದ ಅವರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರು ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ ಏಕೆ ಯಾರು ಮಾತನಾಡುವದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಕೊನೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಕಡೇಮಾಡ ಭರತ್ ಮಾಚಯ್ಯ, ಅನಗತ್ಯವಾಗಿ ಕಾನೂರು ಆರೋಗ್ಯ ಕೇಂದ್ರದ ವಿಚಾರ ದೊಡ್ಡದಾಗಿ ಚಿತ್ರಿಸಲಾಗಿದೆ. ಇಲ್ಲಿ ಯಾವದೇ ಅವ್ಯವಹಾರ ನಡೆದಿಲ್ಲ. ಆಸ್ಪತ್ರೆಯ ಆಡಳಿತ ವಿಚಾರದಲ್ಲಿ ನಡೆದಿರುವ ದುರುಪಯೋಗವನ್ನು ರಕ್ಷಾ ಸಮಿತಿ ನಡೆಸಿದಂತೆ ಸಾರ್ವಜನಿಕರಲ್ಲಿ ತಪ್ಪು ಮಾಹಿತಿ ಮೂಡಿಸುವದು ಸರಿಯಲ್ಲ. ಆಸ್ಪತ್ರೆಯ ರಕ್ಷಾ ಸಮಿತಿಯ ಬಗ್ಗೆ ಅನಗತ್ಯವಾಗಿ ಆರೋಪಿಸಿರುವ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಅವರು ಇನ್ನಾದರೂ ವಾಸ್ತವವನ್ನು ಅರಿಯಬೇಕು. ಪ್ರಚಾರ ಗಿಟ್ಟಿಸಲು ನೇರವಾಗಿ ಪತ್ರಿಕೆಗೆ ಹೋಗುವದಕ್ಕಿಂತ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆದು ಸತ್ಯವನ್ನು ಹೊರತೆಗೆಯಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ತಾ.ಪಂ. ಸದಸ್ಯರಾದ ಪ್ರಕಾಶ್, ಕಾನೂರು ಗ್ರಾ.ಪಂ. ಸದಸ್ಯರು ಆಗಿರುವ ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷೆ ಡಿ.ಸಿ. ಲಲಿತಾ ಕುಮಾರಿ, ಸ್ಥಳೀಯ ವೈದ್ಯಾಧಿಕಾರಿ ಡಾ. ರಾಸ್ಯ, ಗ್ರಾ.ಪಂ. ಸದಸ್ಯರಾದ ಶಿಲ್ಪ ಅಪ್ಪಣ್ಣ, ಸ್ಥಳೀಯ ಪ್ರಮುಖರಾದ ಸುಳ್ಳಿಮಾಡ ರಮೇಶ್, ಆಸ್ಪತ್ರೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮುತ್ತಮ್ಮ ಮೊದಲಾದವರಿದ್ದರು.

ರಫೀಕ್ ತೂಚಮಕೇರಿ, ಎನ್.ಎನ್.ದಿನೇಶ್