ವೀರಾಜಪೇಟೆ, ಜು. 30: ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈ.ಎಸ್. ಈಶ್ವರಿ ಎಂಬಾಕೆಯನ್ನು ದಿಗ್ಬಂಧನದಲ್ಲಿರಿಸಿ ಒಂದು ವರ್ಷದ ತನಕ ಅಧ್ಯಕ್ಷ ಪದವಿಯನ್ನು ದುರುಪಯೋಗ ಪಡಿಸಿಕೊಂಡ ಹಾಗೂ ಜಾತಿ ನಿಂದನೆಯ ಆರೋಪಕ್ಕೊಳಗಾಗಿರುವ ಕೆ.ಎಸ್.ಗೋಪಾಲಕೃಷ್ಣನನ್ನು ನಿನ್ನೆ ದಿನ ರಾತ್ರಿ ಗ್ರಾಮಾಂತರ ಪೊಲೀಸರು ಹಾಸನ ಜಿಲ್ಲೆಯಲ್ಲಿ ಗೊರೂರುವಿನಲ್ಲಿ ಬಂಧಿಸಿ ಇಂದು ಮಡಿಕೇರಿಯ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಈಶ್ವರಿ ತಾ. 27 ರಂದು ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಕಣ್ಣಂಗಾಲ ಗ್ರಾಮ ಪಂಚಾಯಿತಿ ಸದಸ್ಯ ಗೋಪಾಲಕೃಷ್ಣನ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ನಂತರ ಗೊಪಾಲಕೃಷ್ಣ ತಲೆ ಮರೆಸಿಕೊಂಡಿದ್ದು, ಗೊರೂರಿನ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದ ಸುಳಿವು ದೊರೆತ ಮೇರೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಬೆಳಿಗ್ಗೆ ಡಿವೈಎಸ್ಪಿ ನಾಗಪ್ಪ ಹಾಗೂ ಅವರ ತಂಡ ಕಣ್ಣಂಗಾಲದ ಗೋಪಾಲಕೃಷ್ಣನ ಮನೆಗೆ ತೆರಳಿ ಈಶ್ವರಿಗೆ ಸಂಬಂಧಿಸಿದ ದಾಖಲೆಗಳನ್ನು ವಶ ಪಡಿಸಿಕೊಳ್ಳಲು ಹುಡುಕಾಡಿತ್ತು. ಆದರೆ ಯಾವದೇ ದಾಖಲೆಗಳು ದೊರೆಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವೀರಾಜಪೇಟೆ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಫಡ್ನೇಕರ್ ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ತೆರಳಿ ಪಂಚಾಯಿತಿ ಅಧ್ಯಕ್ಷೆ ಈಶ್ವರಿಯಿಂದ ಹೇಳಿಕೆ ಪಡೆದು ದಾಖಲಿಸಿದ್ದಾರೆ.
ಕಚೇರಿಯಲ್ಲಿದ್ದ ಅಭಿವೃದ್ಧಿ ಅಧಿಕಾರಿಯನ್ನು ವಿಚಾರಣೆ ನಡೆಸಿದ್ದಾರೆ. ಪಂಚಾಯಿತಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ.