ಮಡಿಕೇರಿ, ಜೂ. 8: ನಗರದ ಮಹದೇವಪೇಟೆ ರಸ್ತೆ ವಿಸ್ತರಣೆ ಕಾಮಗಾರಿಯನ್ನು ಪೂರ್ಣಗೊಳಿಸಲು ವಕೀಲ ಮಿತ್ರ ಪರಿಷತ್ 20 ದಿನಗಳ ಗಡುವು ನೀಡಿದೆ. ತಪ್ಪಿದಲ್ಲಿ ಸಾರ್ವಜನಿಕ ಸಹಕಾರದೊಂದಿಗೆ ತಾ. 27 ರಂದು ನಗರಸಭೆಗೆ ಮುತ್ತಿಗೆ ಹಾಕುವದಾಗಿ ಎಚ್ಚರಿಕೆ ನೀಡಿದ್ದಾರೆ.

ವಕೀಲ ಮಿತ್ರ ಪರಿಷತ್‍ನ ಅಧ್ಯಕ್ಷ ತಿಮ್ಮಯ್ಯ, ಉಪಾಧ್ಯಕ್ಷ ಚೆಂಗಪ್ಪ, ಖಜಾಂಚಿ ಸುಬ್ಬಯ್ಯ, ರಂಜಿತ್, ಸುದೀಶ್ ಹಾಗೂ ಇನ್ನಿತರರು ನಗರಸಭಾಧ್ಯಕ್ಷೆ ಶ್ರೀಮತಿ ಬಂಗೇರ ಹಾಗೂ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಕಾಮಗಾರಿ ಕಳಪೆಯಾದರೆ ನಗರಸಭಾ ಅಧ್ಯಕ್ಷರು, ಪೌರಾಯುಕ್ತರು ಹಾಗೂ ಗುತ್ತಿಗೆದಾರರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವದಾಗಿ ಅವರು ತಿಳಿಸಿದರು. ಇಲ್ಲಿನ ಹವಾಗುಣಕ್ಕೆ ಕಾಂಕ್ರಿಟ್ ರಸ್ತೆಗಳು ಯೋಗ್ಯವಲ್ಲದ ಕಾರಣ ಮಹದೇವಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಾಂಕ್ರಿಟ್ ರಸ್ತೆಗೆ ಬದಲಾಗಿ ಡಾಂಬರೀಕರಣ ರಸ್ತೆಯನ್ನು ನಿರ್ಮಿಸುವಂತೆ ಒತ್ತಾಯಿಸಿದರು. ಅಭಿವೃದ್ಧಿ ಕಾರ್ಯಕ್ಕೆ ಸ್ಪಂದಿಸಿದ ತಪ್ಪಿಗಾಗಿ ವರ್ತಕರು ಇಂದು ನಷ್ಟ ಅನುಭವಿಸಬೇಕಾಗಿದೆ. ಸ್ಥಳೀಯ ನಿವಾಸಿಗಳು ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸ್ಥಳೀಯರು ಹಾಗೂ ವಾಹನ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರೂ ಇದುವರೆಗೂ ಚುರುಕಿನ ಕಾಮಗಾರಿ ನಡೆದಿಲ್ಲ ಎಂದು ವಕೀಲರು ಮನವಿಯಲ್ಲಿ ಆರೋಪಿಸಿದ್ದಾರೆ.