ಸೋಮವಾರಪೇಟೆ, ಆ. 5: ಗಿರಿಕಂದರಗಳ ಸಾಲಿನಲ್ಲಿ ಹಚ್ಚ ಹಸಿರಿನ ವನಸಿರಿಯ ನಡುವೆ ಸುಮಾರು 95 ಅಡಿಗಳಿಗೂ ಅಧಿಕ ಎತ್ತರದಿಂದ ಧುಮ್ಮಿಕ್ಕುವ ಮಲ್ಲಳ್ಳಿ ಜಲಕನ್ಯೆಯನ್ನು ವೀಕ್ಷಿಸಲು ಪ್ರವಾಸಿಗರ ದಂಡು ಆಗಮಿಸುತ್ತಿದೆ. ವೀಕೆಂಡ್ ದಿನಗಳಲ್ಲಿ ಅತೀ ಹೆಚ್ಚಿನ ಪ್ರವಾಸಿಗರು ಜಲಪಾತಕ್ಕೆ ಭೇಟಿ ನೀಡುತ್ತಿದ್ದು, ಮಳೆಗೆ ಮೈದಳೆದ ಮಲ್ಲಳ್ಳಿ ಜಲಕನ್ಯೆಯ ಸೌಂದರ್ಯವನ್ನು ಸವಿಯುತ್ತಿದ್ದಾರೆ.

ಜಲಪಾತದ ಮೇಲ್ಭಾಗದಲ್ಲಿರುವ ಬೃಹತ್ ಗಾತ್ರದ ಕಲ್ಲುಗಳು ಅತ್ಯಂತ ಆಕರ್ಷಣೀಯ ಸ್ಥಳವಾಗಿದ್ದು, ಇಲ್ಲಿ ನಿಂತು ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಜಲಪಾತದ ಅಂದವನ್ನು ಸೆರೆಹಿಡಿದು ಸಂಭ್ರಮಿಸುತ್ತಿದ್ದಾರೆ. ಗೆಳೆಯರೊಂದಿಗೆ ಸೆಲ್ಫಿ ತೆಗೆದುಕೊಂಡು ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗುತ್ತಿದ್ದಾರೆ.

ಕೊಡಗು ಸೇರಿದಂತೆ ಹೊರ ಜಿಲ್ಲೆಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವದು ವಿಶೇಷವಾಗಿದೆ. ರಾಜಧಾನಿ ಬೆಂಗಳೂರಿನಿಂದಲೇ ಅತಿ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿರುವದು ಕಂಡುಬರುತ್ತಿದೆ.

ಪ್ರವಾಸೋದ್ಯಮ ಇಲಾಖೆಯಿಂದ ಜಲಪಾತದ ತಳಭಾಗದವರೆಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಜಲಧಾರೆಯನ್ನು ಅತ್ಯಂತ ಸನಿಹದಿಂದ ಕಣ್ತುಂಬಿಕೊಳ್ಳಬಹುದಾಗಿದೆ. ಜಲಪಾತದ ಅನತಿ ದೂರದಲ್ಲಿ ಎಚ್ಚರಿಕೆಯ ಫಲಕ ಅಳವಡಿಸಿದ್ದು, ಈ ಎಚ್ಚರಿಕೆಯನ್ನು ಮೀರಿ ನೀರಿಗಿಳಿದರೆ ಅಪಾಯ ಕಟ್ಟಿಟ್ಟ ಬುತ್ತಿ.

ಪ್ರವಾಸೋದ್ಯಮ ಇಲಾಖೆಯಿಂದ ನೂತನವಾಗಿ ಈರ್ವರು ಪ್ರವಾಸಿ ಮಿತ್ರರನ್ನು ಇಲ್ಲಿಗೆ ನಿಯೋಜಿಸಲಾಗಿದ್ದು, ಇವರು ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಮಾಹಿತಿ,ಮೊಬೈಲ್ ನಂಬರ್‍ಗಳನ್ನು ನಮೂದಿಸಿಕೊಳ್ಳುತ್ತಿದ್ದು, ಜಲಪಾತದ ಬಗ್ಗೆ ಮಾಹಿತಿಯನ್ನೂ ನೀಡುತ್ತಿದ್ದಾರೆ. ಜಲಪಾತದ ಬಳಿಗೆ ಮದ್ಯವನ್ನು ಕೊಂಡೊಯ್ಯದಂತೆ, ನೀರಿಗೆ ಇಳಿಯದಂತೆ, ಅಪಾಯಕಾರಿ ಸ್ಥಳಗಳತ್ತ ತೆರಳದಂತೆ ಎಚ್ಚರಿಕೆಯನ್ನು ನೀಡುತ್ತಾರೆ.

ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳುವ ಮೊದಲು ಎದುರಾಗುವ ಹಂಚಿನಳ್ಳಿಯಲ್ಲಿಯೇ ಪ್ರವಾಸಿಗರು ತಮ್ಮ ವಾಹನವನ್ನು ನಿಲ್ಲಿಸಿ ಸ್ಥಳೀಯರ ಜೀಪಿನಲ್ಲಿ ಅಥವಾ ನಡೆದುಕೊಂಡು ತೆರಳಬಹುದಾಗಿದೆ. ಜಲಪಾತಕ್ಕೆ ತೆರಳುವ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸಲಾಗಿದ್ದರೂ ಏಕಕಾಲದಲ್ಲಿ ಎರಡು ವಾಹನಗಳು ಎದುರುಬದುರಾದರೆ ಕೆಸರಿಗೆ ಸಿಲುಕಿ ಸಂಕಷ್ಟ ಎದುರಿಸಬೇಕಾಗುತ್ತದೆ. ಪ್ರವಾಸಿಗರಿಗೆ ಇಂತಹ ಕಿರಿಕಿರಿ ತಪ್ಪಿಸಲೆಂದೇ ಸ್ಥಳೀಯರು ತಮ್ಮ ಜೀಪಿನಲ್ಲಿ (ಫೋರ್ ವೀಲ್) ಹಂಚಿನಳ್ಳಿಯಿಂದ ಜಲಪಾತದವರೆಗೆ ಕರೆದೊಯ್ದು ಬಿಡುತ್ತಾರೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವದರಿಂದ ಮಲ್ಲಳ್ಳಿ ಜಲಪಾತ ದಿನದಿಂದ ದಿನಕ್ಕೆ ತನ್ನ ಸೌಂದರ್ಯವನ್ನು ದ್ವಿಗುಣಗೊಳಿಸಿಕೊಳ್ಳುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಮಳೆಗಾಲ ಪ್ರಾರಂಭದಿಂದ ಹಿಡಿದು ಜನವರಿ ತಿಂಗಳವರೆಗೂ ಹಾಲ್ನೊರೆ ಸೂಸುತ್ತಾ, ಧುಮ್ಮಿಕ್ಕುವ ಮಲ್ಲಳ್ಳಿ ಜಲಪಾತ ನಿಜಕ್ಕೂ ಪ್ರವಾಸಿಗರ ಸ್ವರ್ಗವಾಗಿದೆ.

ದಿನನಿತ್ಯ ನೂರಾರು ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆದು ಹೃನ್ಮನ ತಣಿಸುವ ನ್ಯೆಸರ್ಗಿಕ ಜಲಧಾರೆಯ ಮಲ್ಲಳ್ಳಿ ಜಲಪಾತಕ್ಕೆ ಪ್ರವಾಸಿಗರ ದಂಡು ಲಗ್ಗೆಯಿಡುತ್ತಿದ್ದು, ನೈಸರ್ಗಿಕವಾಗಿ ಸಹಜ ಸೌಂದರ್ಯ ಹೊಂದಿರುವ ಜಲಪಾತ ಇದೀಗ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ನಿಸರ್ಗರಮಣೀಯತೆಯನ್ನು ತನ್ನೊಡಲ್ಲಿರಿಸಿಕೊಂಡಿರುವ ಪುಷ್ಪಗಿರಿ ಬೆಟ್ಟತಪ್ಪಲಿನಲ್ಲಿ ಹುಟ್ಟುವ ಕುಮಾರಧಾರಾ ನದಿ ಮಲ್ಲಳ್ಳಿ ಗ್ರಾಮದ ಬೃಹತ್ ಕಲ್ಲು ಬಂಡೆಯಿಂದ ಕೆಳಭಾಗಕ್ಕೆ ಭೋರ್ಗರೆಯುತ್ತಾ ಧುಮುಕಿ ಜಲಧಾರೆಯಾಗಿ ಪ್ರವಹಿಸುವ ದೃಶ್ಯ ಮನಮೋಹಕವಾಗಿದ್ದು, ಪ್ರವಾಸಿಗರಿಗೆ ಜೋಗ ಜಲಪಾತದ ಅನುಭವ ನೀಡುತ್ತದೆ. ಜಲಪಾತದ ಕೆಳಭಾಗಕ್ಕೆ ಮೆಟ್ಟಿಲುಗಳ ಮೂಲಕ ತೆರಳಿದರೆ ದಟ್ಟ ಹಿಮದೊಂದಿಗೆ ಎಳೆ ನೀರಿನ ಸಿಂಚನವಾಗುತ್ತದೆ. ನೈಸರ್ಗಿಕ ಸ್ವರ್ಗವೇ ಇಲ್ಲಿ ಸೃಷ್ಟಿಯಾದಂತೆ ಮಲ್ಲಳ್ಳಿ ಜಲಪಾತ ಕಂಗೊಳಿಸುವ ಪರಿ ನಿಜಕ್ಕೂ ವರ್ಣಿಸಲಸಾಧ್ಯ.

ಬೆಟ್ಟದ ತುದಿಯನ್ನು ಸ್ಪರ್ಶಿಸಿ ತೇಲುವ ಮೋಡಗಳು.., ಹಚ್ಚಹಸಿರಿನ ವನರಾಶಿಯ ನಡುವೆ ಮಂಜಿನ ಹನಿಗಳ ಚೆಲ್ಲಾಟ.., ಸುತ್ತಲೂ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಪ್ರದೇಶ.., ಎರಡೂ ಬದಿಯಲ್ಲಿ ಬೃಹತ್ ಬೆಟ್ಟ.., ನಡುವೆ ಹಾಲಿನ ಹೊಳೆಯೇ ಹರಿಯುತ್ತಿದೆಯೇನೋ ಎಂದು ಭಾಸವಾಗುವ ಹಾಲ್ನೊರೆಯಂತಹ ನೀರಿನ ವೈಭವ.., ಜುಳುಜುಳು ನಾದದೊಂದಿಗೆ ಹೃನ್ಮನ ತಣಿಸುವ ಸೌಂದರ್ಯದ ಖನಿ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ಇದು ಸುಸಂದರ್ಭವಾಗಿದ್ದು, ನೀವೂ ಒಮ್ಮೆ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ!

- ವಿಜಯ್ ಹಾನಗಲ್