ಮಡಿಕೇರಿ, ಆ. 5: ಪ್ರತಿಯೊಬ್ಬ ರಲ್ಲಿ ಸೇವಾ ಮನೋಭಾವ ಇದ್ದಲ್ಲಿ ರಾಷ್ಟ್ರದ ಪ್ರಗತಿ ಸಾಧ್ಯ, ಆ ನಿಟ್ಟಿನಲ್ಲಿ ಭಾರತ ಸೇವಾದಳ ಬಲಪಡಿಸಲು ಕೈಜೋಡಿಸಬೇಕಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದ್ದಾರೆ. ಭಾರತ ಸೇವಾದಳ ವತಿಯಿಂದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಭಾರತ ಸೇವಾದಳ ಶಿಕ್ಷಕರ ಜಿಲ್ಲಾ ಮಟ್ಟದ ಶಿಕ್ಷಕ್ ಮಿಲಾಪ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಹರ್ಡಿಕರ್ ಅವರ ನೇತೃತ್ವದಲ್ಲಿ ಸೇವಾದಳವನ್ನು ಆರಂಭಿಸಲಾಯಿತು. ಇದರಲ್ಲಿ ಶಿಕ್ಷಕರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ತೊಡಗಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ ಎಂದು ಹೇಳಿದರು.

ಸೇವಾದಳದ ಧ್ಯೇಯವಾಕ್ಯ ‘ಸೇವೆಗಾಗಿ ಬಾಳು’ ಎಂಬದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಬದುಕಿಗಾಗಿ ಸೇವೆ ಎಂಬಂತಾಗಿದೆ. ಇದನ್ನು ಹೋಗಲಾಡಿಸಿ, ಎಲ್ಲರಲ್ಲಿಯೂ ಸೇವಾ ಮನೋಭಾವ ಇರಬೇಕು ಎಂದು ಸಲಹೆ ಮಾಡಿದರು. ಸೇವಾದಳದ ಕಟ್ಟಡ ಕಾಮಗಾರಿಯನ್ನು ಕಾಲಮಿತಿ ಯೊಳಗೆ ಪೂರ್ಣಗೊಳಿಸಲು ಇದೇ ಸಂದರ್ಭದಲ್ಲಿ ತಿಳಿಸಿದ ಶಾಸಕರು, ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ. ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಕ್ರೀಡಾ ವಸತಿ ಶಾಲೆಗಳು, ಹಾಕಿ ಟರ್ಫ್ ಮೈದಾನಗಳು, ಚಿಕ್ಕಳುವಾರದಲ್ಲಿ ವಿಶ್ವವಿದ್ಯಾನಿಲಯ, ಕೂಡಿಗೆಯಲ್ಲಿ ಸೈನಿಕ ಶಾಲೆ ಹೀಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ತಮ್ಮ ಆಡಳಿತಾವಧಿ ಯಲ್ಲಿ ಮಾಡಲಾಗಿದೆ. ಕುಶಾಲನಗರ ದವರೆಗೆ ರೈಲ್ವೇ ಹಾಗೂ ವಿಮಾನ ಯಾನ ಸಂಪರ್ಕವಾಗಬೇಕಿದೆ. ಆ ನಿಟ್ಟಿನಲ್ಲಿ ಅಭಿವೃದ್ಧಿಗೆ ಜಿಲ್ಲೆಯ ಜನತೆ ಕೈಜೋಡಿಸಬೇಕಿದೆ ಎಂದು ಶಾಸಕರು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತ್ ಸೇವಾದಳದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು ರೂ. 5 ಲಕ್ಷ ಅನುದಾನ ಬಿಡುಗಡೆ ಮಾಡಲಾಗುವದು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು ಮಾತನಾಡಿ, ಅಹಿಂಸಾತ್ಮಕವಾಗಿ ಸ್ವಾತಂತ್ರ್ಯ ಪಡೆಯಬೇಕು ಎಂಬ ಉದ್ದೇಶದಿಂದ ಸೇವಾದಳ ಆರಂಭವಾಯಿತು. ಆ ನಿಟ್ಟಿನಲ್ಲಿ ದೇಶ ಸೇವೆಗಾಗಿ ಹಲವರು ಸೇವೆ ಸಲ್ಲಿಸಿದ್ದಾರೆ. ಇದೊಂದು ಸ್ಮರಣೀಯ ಕಾರ್ಯವಾಗಿದೆ. ಅಹಿಂಸಾತ್ಮಕ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ಮಾಡಿದರು. ಭಾರತ ಸೇವಾ ದಳದ ಕೇಂದ್ರ ಸಮಿತಿ ಸದಸ್ಯ ಎ.ಕೆ. ಪಾಲಾಕ್ಷ, ನಾರಾಯಣ ಸುಬ್ಬರಾವ್ ಹರ್ಡಿಕರ್ ಅವರು ಭಾರತ ಸೇವಾದಳವನ್ನು ಕಟ್ಟಿದರು. ಇವರ ಸ್ಮರಣಾರ್ಥ ಭಾರತ ಸೇವಾ ದಳ ದೇಶದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯ ನಿರ್ವಹಿಸಿ ಕೊಂಡು ಬರುತ್ತದೆ. ಭಾರತ ಸೇವಾದಳ ಜಿಲ್ಲಾ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಕೋರಿದರು. ಮಡಿಕೇರಿ ತಾಲೂಕು ಸಮಿತಿ ಅಧ್ಯಕ್ಷ ಕೋಡಿ ಚಂದ್ರಶೇಖರ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಜಗದೀಶ ಮತ್ತಿತರರು ಇದ್ದರು. ರೇವತಿ ರಮೇಶ್ ವಿಧಾನ ಪರಿಷತ್ ಸದಸ್ಯರ ಪರಿಚಯ ಮಾಡಿದರು. ಭಾರತ ಸೇವಾ ದಳದ ಖಜಾಂಚಿ ನಾಪಂಡ ರವಿ ಕಾಳಪ್ಪ ಅವರು ಸ್ವಾಗತಿಸಿ, ಜಿಲ್ಲಾ ಸಂಚಾಲಕ ಚಂದ್ರಕಾಂತ್ 2015-16ನೇ ಸಾಲಿನ ವರದಿ ವಾಚಿಸಿದರು. ಕಾರ್ಯದರ್ಶಿ ಮೋಂತಿ ಗಣೇಶ್ ವಂದಿಸಿದರು.