ವೀರಾಜಪೇಟೆ, ಜ. 2: ನಾಲ್ಕೂವರೆ ದಶಕಗಳಿಂದ ಇಲ್ಲಿನ ಮಲೆ ತಿರಿಕೆ ಬೆಟ್ಟದ ಅಯ್ಯಪ್ಪ ದೇವಸ್ಥಾನದ ಸೇವಾ ಸಮಿತಿಯ ಟ್ರಸ್ಟ್ ವತಿಯಿಂದ ಆಚರಿಸಿಕೊಂಡು ಬರುತ್ತಿರುವ ಅಯ್ಯಪ್ಪ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಅಯ್ಯಪ್ಪ ಉತ್ಸವದ ಅಂಗವಾಗಿ ತಾ30ರಂದು ರಾತ್ರಿ ಸಾಂಪ್ರದಾಯಿಕ ಪೂಜೆಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಬೆಳಿಗ್ಗೆ ಹಾಗೂ ರಾತ್ರಿ ವಿಶೇಷ ಮಹಾಪೂಜೆ ನೇರವೇರಿತು. ನಿನ್ನೆ ಮುಂಜಾನೆ ಗಣಪತಿ ಹೋಮ, ತುಲಾಭಾರ, ಲಕ್ಷಾರ್ಚನೆ ಅಪರಾಹ್ನ ಮಹಾಪೂಜಾ ಸೇವೆ ಬಳಿಕ ಅನ್ನದಾನ ಜರುಗಿತು.
ಅದ್ಧೂರಿಯ ಮೆರವಣಿಗೆ
ರಾತ್ರಿ ಸಿದ್ದಾಪುರದ ರಸ್ತೆಯಿಂದ ಮೆರವಣಿಗೆ ಆರಂಭಗೊಂಡಿತು. ಮೆರವಣಿಗೆಯಲ್ಲಿ ದೀಪಾರತಿ, ಆನೆ ಅಂಬಾರಿ, ಕೇರಳದ ಚಂಡೆಮದ್ದಳೆ, ಅಯ್ಯಪ್ಪನ ಚಲನ ವಲನವಿರುವ ವಿಗ್ರಹ, ದಕ್ಷಿಣ ಕನ್ನಡದ ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗ ಪಾಲ್ಗೊಂಡಿದ್ದವು.
ಮೆರವಣಿಗೆಯು ತೆಲುಗರಬೀದಿ, ಜೈನರಬೀದಿ, ಎಫ್.ಎಂ.ಸಿ ರಸ್ತೆ, ಮುಖ್ಯ ರಸ್ತೆಯ ಮಾರ್ಗವಾಗಿ ರಾತ್ರಿ 11ಗಂಟೆಗೆ ಮಲಬಾರ್ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನ ತಲುಪಿ ಮುತ್ತಪ್ಪ ಹಾಗೂ ಆನೆ ಅಂಬಾರಿಗೆ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಹಿಂತಿರುಗಿ ಮಧ್ಯ ರಾತ್ರಿ ದೇವಾಲಯಕ್ಕೆ ತಲುಪಿ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಉತ್ಸವ ಮುಕ್ತಾಯಗೊಂಡಿತು.
ಭಕ್ತಾದಿಗಳು ಬೆಳಗ್ಗಿನಿಂದಲೇ ಅಯ್ಯಪ್ಪ ಉತ್ಸವದಲ್ಲಿ ಸರದಿಯಲ್ಲಿ ದೇವಾಲಯಕ್ಕೆ ಆಗಮಿಸಿ ಮಹಾಪೂಜಾ ಸೇವೆಯ ವೇಳೆಗೆ ದೇವಾಲಯದಲ್ಲಿ ಭಕ್ತಾಧಿಗಳು ಕಿಕ್ಕಿರಿದು ಸೇರಿದ್ದರು. ಅನ್ನ ಸಂತರ್ಪಣೆ ಸಂದರ್ಭದಲ್ಲಿ ಸಾವಿರಾರು ಭಕ್ತಾಧಿಗಳು, ಮಹಿಳೆಯರು, ಪುರುಷರು ಮಕ್ಕಳು ಎಂಬಂತೆ ಸರದಿಯಲ್ಲಿ ಭಾಗವಹಿಸಿದ್ದರು. ಅಯ್ಯಪ್ಪ ಉತ್ಸವದಿಂದ ವೀರಾಜಪೇಟೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಮೂಡಿತ್ತು.
ರಾತ್ರಿ ನಡೆದ ಮೆರವಣಿಗೆಯನ್ನು ವೀಕ್ಷಿಸಲು ದೊಡ್ಡಟ್ಟಿ ಚೌಕಿಯಿಂದ ಗಡಿಯಾರ ಕಂಬದವರಗೆ ಜನರು ರಸ್ತೆಯ ಎರಡು ಬದಿಗಳಲ್ಲಿ ಕಿಕ್ಕಿರಿದು ನೆರದಿದ್ದರು.
ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಡಿ.ವೈಎಸ್ಪಿ ನಾಗಪ್ಪ ಅವರ ನಿರ್ದೇಶನದಲ್ಲಿ, ಸರ್ಕಲ್ ಇನ್ಸಪೆಕ್ಟರ್ ಕುಮಾರ್ ಆರಾಧ್ಯ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುಬ್ರಮಣಿ ಬಂದೋಬಸ್ತ್ ಉಸ್ತುವಾರಿ ವಹಿಸಿದ್ದರು. ಮಹಿಳಾ ಪೊಲೀಸರು, ಹೋಮ್ಗಾರ್ಡ್ಗಳು, ಸಂಚಾರಿ ಪೊಲೀಸರು ಬಂದೋಬಸ್ತ್ನಲ್ಲಿ ಭಾಗವಹಿಸಿದ್ದರು.