ಮಡಿಕೇರಿ, ಆ. 6: ಮಗು ಹುಟ್ಟಿದ ತಕ್ಷಣವೇ ಆರು ತಿಂಗಳ ಕಾಲ ತಾಯಿ ಹಾಲನ್ನು ಕಡ್ಡಾಯ ವಾಗಿ ಮಗುವಿಗೆ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರಾ ಹೇಳಿದರು.
ನಗರದ ಮಹದೇವಪೇಟೆಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತನ್ಯಪಾನ ಜಾಗೃತ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಯಿಯ ಹಾಲು ಮಕ್ಕಳಿಗೆ ಉತ್ಕøಷ್ಟವಾದ ಆಹಾರವಾಗಿದೆ. ಮಗು ಜನನವಾದ ಆರು ತಿಂಗಳು ತಾಯಿ ಹಾಲನ್ನು ಕಡ್ಡಾಯವಾಗಿ ಮಗುವಿಗೆ ಕೊಡುವ ಜವಾಬ್ದಾರಿ ಪ್ರತಿ ತಾಯಿಯಲ್ಲಿ ಇರಬೇಕು. ಮಗು ಹುಟ್ಟಿದ ಮೊದಲ ಆರು ತಿಂಗಳು ತಾಯಿಯ ಹಾಲು ಮಗುವಿಗೆ ಅಮೃತವಾಗಿದೆ, 6 ತಿಂಗಳ ಕಾಲ ತಾಯಿ ಹಾಲಿನ ವಿನಃ ಬೇರೆ ಯಾವ ಆಹಾರದ ಅವಶ್ಯಕತೆ ಇರುವದಿಲ್ಲ. ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿರುತ್ತದೆ ಆದ್ದರಿಂದ 2 ವರ್ಷಗಳ ಕಾಲ ತಾಯಿ ತನ್ನ ಮಗುವಿಗೆ ಎದೆ ಹಾಲನ್ನು ಉಣಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ಶ್ರೀರಂಗಪ್ಪ ಅವರು ಮಾತನಾಡಿ, ಪ್ರಪಂಚದಲ್ಲಿನ ಮೂರನೆಯ ಒಂದು ಭಾಗದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಒಂದರಿಂದ ಐದು ವರ್ಷದ ಶೇ. 50 ರಷ್ಟು ಮಕ್ಕಳ ಮರಣಕ್ಕೆ ಅಪೌಷ್ಟಿಕತೆಯೇ ಕಾರಣವಾಗಿದೆ, ಮಗುವಿಗೆ ಮೊದಲ ಆರು ತಿಂಗಳು ಎದೆ ಹಾಲನ್ನು ಮಾತ್ರ ಕೊಡಬೇಕು. ಮಗು ಹುಟ್ಟಿದ ಅರ್ಧ ಗಂಟೆಯೊಳಗೆ ಎದೆ ಹಾಲನ್ನು ಕೊಡಲು ಮುಂದಾಗಬೇಕು. ಇದರಿಂದ ಮಗುವಿಗೆ ಎಲ್ಲಾ ಪೌಷ್ಟಿಕಾಂಶ ದೊರೆಯುವಂತಾಗಿ ಆರೋಗ್ಯ ಜೀವನ ಪಡೆಯುತ್ತದೆ ಎಂದರು.
ವಿಶ್ವ ಸ್ತನ್ಯಪಾನ ಸಪ್ತಾಹವು ಆಗಸ್ಟ್ ಮೊದಲ ವಾರದಲ್ಲಿ ನಡೆಯುತ್ತಿದ್ದು, ಮಕ್ಕಳಿಗೆ ಎದೆ ಹಾಲಿನ ಪ್ರಾಮುಖ್ಯತೆ ಹಾಗೂ ಚಿಕ್ಕ ಮಕ್ಕಳ ಪೂರಕ ಪೌಷ್ಟಿಕ ಆಹಾರದ ಬಗ್ಗೆ ತಾಯಂದಿರಿಗೆ ಹಾಗೂ ಸಂಬಂಧ ಪಟ್ಟವರಿಗೆ ತಿಳುವಳಿಗೆ ನೀಡುವಂತೆ ಆಗಬೇಕು. ಹೆಚ್ಚಿನದಾಗಿ ತಾಯಿ ಮತ್ತು ಮಗುವಿನ ಪೌಷ್ಟಿಕಾಂಶದ ಕೊರತೆಗೆ ಬಡತನ, ಮೂಢನಂಬಿಕೆ, ಅಜ್ಞಾನ ಹಾಗೂ ಆರೋಗ್ಯ ಶಿಕ್ಷಣದ ಕೊರತೆ ಇರುತ್ತದೆ. ಆದ್ದರಿಂದ ಹತ್ತಿರದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯುವಂತೆ ಸಲಹೆ ಮಾಡಿದರು.
ಆರೋಗ್ಯಾಧಿಕಾರಿ ಡಾ. ದೇವಿಆನಂದ್ ಮಾತನಾಡಿ, ಇತ್ತೀಚಿನ ಆಧುನೀಕರಣ, ಕೈಗಾರೀಕರಣ-ವ್ಯಾಪಾರೀಕರಣ ದಿನಗಳಲ್ಲಿ ಮಕ್ಕಳಿಗೆ ತಾಯಂದಿರು ಹಾಲು ಉಣಿಸುವಲ್ಲಿ ಹೆಚ್ಚಿನ ನಿಗಾವಹಿಸದಿರುವದು ಸಮೀಕ್ಷೆಯಿಂದ ಕಂಡು ಬಂದಿದೆ.
ಹಲವಾರು ಬಾರಿ ಮೂಢ ನಂಬಿಕೆಗಳು, ಸಂಪ್ರದಾಯಗಳು, ಅಜ್ಞಾನ ಇದ್ದಕ್ಕೆ ಕಾರಣವಾಗಿದೆ, ಮಕ್ಕಳ ಮರಣ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ತಾಯಿ ಹಾಲು ಪ್ರಮುಖ ಪಾತ್ರ ವಹಿಸಿದು,್ದ ಈ ಬಗ್ಗೆ ಅಗತ್ಯ ಮಾಹಿತಿ ಪಡೆಯುವದು ಅವಶ್ಯಕವಾಗಿದೆ ಎಂದರು.
ಅಲ್ಲದೆ, ತಾಯಿಯು ನಿರಂತರವಾಗಿ ಎದೆ ಹಾಲನ್ನು ಮಗುವಿಗೆ ಉಣಿಸುವದರಿಂದ ಸಕ್ಕರೆ, ಬೊಜ್ಜು, ಕ್ಯಾನ್ಸರ್ ಮತ್ತಿತರ ಕಾಯಿಲೆಗಳಿಂದ ದೂರವಿರ ಬಹುದು.
ಮಗು ಹುಟ್ಟಿದ ತಕ್ಷಣದಿಂದಲೇ ತಾಯಿ ಗಿನ್ನಾಲು ಮಗುವಿಗೆ ಉತ್ತಮ ಆಹಾರ ವಾಗಿದ್ದು, ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ ಎಂದು ತಿಳಿಸಿದರು.
ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್, ಡಾ. ನೀನಾ ಸುಬ್ಬಯ್ಯ, ಮತ್ತಿತರರು ಇದ್ದರು, ಶ್ರುಶ್ರ್ರೂಷಕಿ ಅನಿತಾ ಮತ್ತು ಕಾವೇರಮ್ಮ ಪ್ರಾರ್ಥಿಸಿದರು, ಹಿರಿಯ ಮಹಿಳಾ ಆರೋಗ್ಯಾಧಿಕಾರಿ ಕಾವೇರಮ್ಮ ಸ್ವಾಗತಿಸಿ, ನಿರೂಪಿಸಿದರು, ಕಿರಿಯ ಸಹಾಯಕಿ ಜ್ಯೋತಿ ವಂದಿಸಿದರು.