ಸೋಮವಾರಪೇಟೆ, ಜು. 13: ಕಳೆದೆರಡು ದಿನಗಳಿಂದ ಸೋಮವಾರ ಪೇಟೆ ವಿಭಾಗದಲ್ಲಿ ಸುರಿದ ಭಾರೀ ಮಳೆ-ಗಾಳಿಗೆ ಅಲ್ಲಲ್ಲಿ ಹಾನಿಗಳು ಸಂಭವಿಸಿವೆ. ಕೆಲವೆಡೆಗಳಲ್ಲಿ ವಾಸದ ಮನೆಗಳಿಗೆ ಹಾನಿಯಾಗಿದ್ದರೆ, ವೀರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿಯಲ್ಲಿ ಭಾರೀ ಗಾತ್ರದ ಮರವೊಂದು ರಸ್ತೆಗಡ್ಡಲಾಗಿ ಬಿದ್ದಿದ್ದು, ಪವಾಡ ಸದೃಶ ರೀತಿಯಲ್ಲಿ ಅನಾಹುತ ತಪ್ಪಿದೆ.
ಭಾರೀ ಮಳೆಗೆ ವಾಸದ ಮನೆ ಮೇಲೆ ಮರ ಬಿದ್ದು ಭಾರೀ ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ. ಗ್ರಾಮದಲ್ಲಿ ಸಂಭವಿಸಿದೆ.
ಗರಗಂದೂರು ಬಿ. ಗ್ರಾಮದ ದಿ. ಪೂವಯ್ಯ ಅವರ ಪತ್ನಿ ವಾರಿಜ ಎಂಬವರಿಗೆ ಸೇರಿದ ವಾಸದ ಮನೆ ಮೇಲೆ ಮರ ಬಿದ್ದಿದ್ದು, ಮನೆಯ ಛಾವಣಿ ಜಖಂಗೊಂಡು ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಮರ ಬಿದ್ದ ಸಂದರ್ಭ ವಾರಿಜ ಅವರು ಮನೆಯೊಳಗೆ ಮಲಗಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.
ಕಿರಗಂದೂರು ಗ್ರಾಮದ ಪೂವಯ್ಯ ಎಂಬವರಿಗೆ ಸೇರಿದ ವಾಸದ ಮನೆ ಕುಸಿದಿದ್ದು, 250ಕ್ಕೂ ಅಧಿಕ ಹೆಂಚುಗಳು ಪುಡಿಯಾಗಿವೆ. ರೂ. 18 ಸಾವಿರ ನಷ್ಟ ಸಂಭವಿಸಿರುವದಾಗಿ ವರದಿಯಾಗಿದೆ.
ನಗರಕ್ಕೆ ಸಮೀಪದ ಚೌಡ್ಲು ಗ್ರಾಮದಲ್ಲಿ ದೊರೆ ಎಂಬವರಿಗೆ ಸೇರಿದ ವಾಸದ ಮನೆಯ ಒಂದು ಗೋಡೆ ಕುಸಿದು ಬಿದ್ದು, ಛಾವಣಿ ಜಖಂಗೊಂಡಿದ್ದು, ರೂ. 18 ಸಾವಿರ ನಷ್ಟಗೊಂಡಿರುವ ಕುರಿತು ತಾಲೂಕು ಕಚೇರಿಗೆ ವರದಿಯಾಗಿದೆ.
ವೀರಾಜಪೇಟೆ ಬೈಂದೂರು ರಾಜ್ಯ ಹೆದ್ದಾರಿಯ ಸೋಮವಾರಪೇಟೆ ಶನಿವಾರಸಂತೆ ಮಾರ್ಗದ ಕಿಬ್ಬೆಟ್ಟ ತಿರುವಿನಲ್ಲಿ ಭಾರೀ ಗಾತ್ರದ ಮಾವಿನ ಮರ ಮುರಿದು ರಸ್ತೆಗೆ ಮಗುಚಿಕೊಂಡ ಪರಿಣಾಮ ಕೆಲಕಾಲ ಸಂಚಾರ ಅಸ್ತವ್ಯಸ್ಥಗೊಂಡಿತ್ತು.
ಸೋಮವಾರಸಂತೆ ದಿನವಾದ್ದ ರಿಂದ ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು. ಮಧ್ಯಾಹ್ನ 12-30ರ ಸಮಯದಲ್ಲಿ ಮರ ಬಿದ್ದಿದ್ದು, ಕೇವಲ ಎರಡು ಮೀಟರ್ ಅಂತರದಲ್ಲಿ ಬೈಕ್ ಸವಾರರಿಬ್ಬರು ಪ್ರಾಣಪಾಯದಿಂದ ಪಾರಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಮರದ ರೆಂಬೆಗಳು ರಸ್ತೆಯಲ್ಲಿ ಬಿದ್ದಿರುವದರಿಂದ, ಸ್ವಲ್ಪ ಸಮಯ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಪಕ್ಕದ ಕಾಫಿ ತೋಟದಲ್ಲಿದ್ದ ಕಾರ್ಮಿಕರು ಹಾಗೂ ವಾಹನ ಚಾಲಕರುಗಳು ರಸ್ತೆಯಲ್ಲಿದ್ದ ರೆಂಬೆಗಳನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.