ಕೂಡಿಗೆ, ಜು. 13: ಇಲ್ಲಿಗೆ ಸಮೀಪದ ಹುದುಗೂರು ಸಸ್ಯ ಕ್ಷೇತ್ರದಲ್ಲಿ ಸೋಮವಾರಪೇಟೆ ಸಾಮಾಜಿಕ ಅರಣ್ಯ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಬೆಳೆಸಲಾಗಿದ್ದ ಸಿಲ್ವರ್ ಗಿಡಗಳನ್ನು ಕ್ಷೇತ್ರದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳಾ ವಿತರಣೆ ಮಾಡಿದರು.

ಈ ಸಂದರ್ಭ ಮಾತನಾಡಿದ ಅವರು, ರೈತರು ಗಿಡಗಳನ್ನು ತಮ್ಮ ಜಮೀನುಗಳಲ್ಲಿ ನೆಟ್ಟು-ಬೆಳೆಸಿ ಅವುಗಳ ಪೋಷಣೆಯ ನಂತರ ಕಾಳು ಮೆಣಸು ಬಳ್ಳಿಯನ್ನು ಹಬ್ಬಿಸಿದ್ದಲ್ಲಿ, ತೋಟಗಾರಿಕಾ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದನ್ನು ಸದ್ಬಳಸಿಕೊಳ್ಳುವಂತೆ ಕರೆ ನೀಡಿದರು.

ಈ ಸಂದರ್ಭ ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್. ರಾಜಾರಾವ್ ಮಾತನಾಡಿ, ಸರಕಾರ ಹಾಗೂ ಜಿ.ಪಂ. ವತಿಯಿಂದ ಬೆಳೆಸಲಾಗಿ ರೈತರಿಗೆ ವಿತರಣೆ ಮಾಡುತ್ತಿರುವ ಗಿಡಗಳನ್ನು ರೈತರು ಸಮರ್ಪಕವಾಗಿ ಪಡೆದು ತಮ್ಮ ಅಭಿವೃದ್ಧಿಗೆ ಅನುಕೂಲವಾಗುವ ರೀತಿಯಲ್ಲಿ ಸದುಪಯೋಗ ಮಾಡಿಕೊಳ್ಳಬೇಕೆಂದರು.

ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹೆಚ್.ಎಸ್. ರವಿ, ಸೋಮವಾರಪೇಟೆ ತಾಲೂಕು ಸಾಮಾಜಿಕ ಅರಣ್ಯ ವಲಯಾಧಿಕಾರಿ ಜೆ.ಪಿ. ಪ್ರಸನ್ನ ಸೇರಿದಂತೆ ರೈತರು ಹಾಜರಿದ್ದರು.