ಮಡಿಕೇರಿ, ಆ. 16: ರಕ್ಷಣೆ ಮತ್ತು ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನವನ್ನು ತಾ. 18 ರಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಜಿಲ್ಲೆಯಾದ್ಯಂತ ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ಸಾವಿರ ವರ್ಷಗಳ ಹಿಂದೆಯೇ ರಜಪೂತರ ಕಾಲದಲ್ಲಿ ಸುಲ್ತಾನರಿಗೆ ರಾಖಿ ಕಟ್ಟುವ ಮೂಲಕ ಯುದ್ಧವನ್ನು ನಿಲ್ಲಿಸಲಾಗಿದೆ ಮತ್ತು ರಕ್ಷಣೆÉಯನ್ನು ಪಡೆದ ಇತಿಹಾಸವಿದೆ. ಈ ರೀತಿಯ ಮಹತ್ವವನ್ನು ಹೊಂದಿರುವ ರಕ್ಷೆಯನ್ನು ಗ್ರಾಮ ಗ್ರಾಮಗಳಲ್ಲಿ ರಕ್ಷಾ ಬಂಧನದ ಸಂದರ್ಭ ಕಟ್ಟುವ ಮೂಲಕ ಬಾಂಧವ್ಯವನ್ನು ಹೆಚ್ಚಿಸಲಾಗುವದೆಂದು ತಿಳಿಸಿದರು.

ತಾ. 18 ರಂದು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೆÀÇಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತು ಮಾಜಿ ಸೈನಿಕರಿಗೆ ವಿಶೇಷವಾಗಿ ರಾಖಿ ಕಟ್ಟಲಾಗುವದು. ಅಲ್ಲದೆ ಮಹಿಳಾ ಮೋರ್ಚಾದ ವತಿಯಿಂದ ಗ್ರಾಮೀಣ ಭಾಗಗಳಲ್ಲಿ ರಕ್ಷಾ ಬಂಧನವನ್ನು ನಡೆಸಲಾಗುವದು. ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈಶಾನ್ಯ ರಾಜ್ಯಗಳ ಕಾರ್ಮಿಕರಿಗೂ ರಕ್ಷಾಬಂಧನದ ಮಹತ್ವವನ್ನು ತಿಳಿಸುವ ಮೂಲಕ ರಾಷ್ಟ್ರಾಭಿಮಾನವನ್ನು ಮೂಡಿಸಲಾಗುವದೆಂದು ಯಮುನಾ ಚಂಗಪ್ಪ ಹೇಳಿದರು.

ಜಿಲ್ಲೆಯ ಮೂರು ತಾಲೂಕುಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ನಡೆಯಲಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ರಕ್ಷಾಬಂಧನ ಕಾರ್ಯಕ್ರಮ ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ ಎಂದರು.

ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಡಿ. ಭುವನೇಶ್ವರಿ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ಸುಮಿ ಸುಬ್ಬಯ್ಯ, ಮಡಿಕೇರಿ ನಗರ ಅಧ್ಯಕ್ಷೆ ಅನಿತಾ ಪೂವಯ್ಯ, ಪ್ರಧಾನ ಕಾರ್ಯದರ್ಶಿ ಗೀತಾ ಪವಿತ್ರ ಹಾಗೂ ಸೀತಮ್ಮ ಉಪಸ್ಥಿತರಿದ್ದರು.