ಮಡಿಕೇರಿ, ಆ. 16: ವಿವಿಧ ಕಾರಣಗಳಿಂದ ತೆರವಾದ ಜಿಲ್ಲೆಯ ಮಡಿಕೇರಿ ತಾಲೂಕಿನ ಎಮ್ಮೆಮಾಡು, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ, ವೀರಾಜಪೇಟೆ ತಾಲೂಕಿನ ಕಾನೂರು ಮತ್ತು ಮಾಲ್ದಾರೆ ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ 5 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಈ ಹಿನ್ನೆಲೆ ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತಾ. 31 ರ ವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದಂತೆ ಚುನಾವಣಾ ಕಾಲದಲ್ಲಿ ಲಂಚಗುಳಿತನ ಮತ್ತು ಅನಗತ್ಯ ಪ್ರಭಾವ ಬೀರುವಂತಹ ವ್ಯವಸ್ಥೆಯನ್ನು ತಡೆಯುವ ದೃಷ್ಟಿಯಿಂದ ರಾಜ್ಯ ಚುನಾವಣಾ ಆಯೋಗವು ವಿವಿಧ ಕ್ರಮಗಳನ್ನು ಸೂಚಿಸಿದೆ. ಅದರಂತೆ ಯಾವ ಪಂಚಾಯಿತಿ ಪ್ರದೇಶದಲ್ಲಿ ನೀತಿಸಂಹಿತೆ ಜಾರಿಯಲ್ಲಿರುತ್ತದೆಯೋ ಆ ಪಂಚಾಯಿತಿ ಪ್ರದೇಶದ ಒಳಗೆ ನೀತಿ ಸಂಹಿತೆಯು ಜಾರಿಯಲ್ಲಿರುವ ಇಡೀ ಅವಧಿಯವರೆಗೆ ಎಲ್ಲಾ ಮದ್ಯದ ಅಂಗಡಿಗಳ ಮತ್ತು ಮದ್ಯ ತಯಾರಿಕಾ ಘಟಕಗಳ ಮಾಲೀಕರು ಅಧಿಭೋಗದಾರರು ಮತ್ತು ಸಂದರ್ಭನುಸಾರವಾಗಿ ವ್ಯವಸ್ಥಾಪಕರು ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುವ ಅವಧಿಯಲ್ಲಿ ಘಟಕಗಳನ್ನು ಮುಚ್ಚತಕ್ಕದ್ದು ಮತ್ತು ಮೊಹರು ಮಾಡಿ ಕೀಯನ್ನು ಜಿಲ್ಲಾಧಿಕಾರಿಗಳಿಗೆ ಅಥವಾ ಅಧಿಕಾರಿ ವ್ಯಾಪ್ತಿಯುಳ್ಳ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‍ರವರಿಗೆ ಒಪ್ಪಿಸತಕ್ಕದು, ಈ ಸಂದರ್ಭಗಳಲ್ಲಿ ಮದ್ಯವನ್ನು ಸ್ವಾಧೀನದಲ್ಲಿಟ್ಟುಕೊಳ್ಳುವದು ಅಥವಾ ಮದ್ಯವನ್ನು ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ತೊಂದರೆ ಮಾಡುವದು ಕಂಡುಬಂದರೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.