ಸೋಮವಾರಪೇಟೆ,ಜೂ.24: ಅಪರಿಚಿತ ಯುವಕರ ತಂಡ ಬಿಜೆಪಿ ಕಾರ್ಯಕರ್ತನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಸಮೀಪದ ಮಸಗೋಡು ಗ್ರಾಮದ ಜಂಕ್ಷನ್ನಲ್ಲಿ ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಮಸಗೋಡು ಗ್ರಾಮದ ನಿವಾಸಿ ಕೊಮಾರಿ ಸತೀಶ್ ಎಂಬವರು ನಿನ್ನೆ ರಾತ್ರಿ 11 ಗಂಟೆಗೆ ಪಟ್ಟಣದಿಂದ ಮನೆಗೆ ತೆರಳುವ ಮಾರ್ಗಮಧ್ಯೆ ಘಟನೆ ನಡೆದಿದ್ದು, ಬೈಕ್ನಲ್ಲಿದ್ದ ಯುವಕ ತನ್ನ ಬಳಿಯಿದ್ದ ಕತ್ತಿಯಿಂದ ಸತೀಶ್ ಅವರ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಕಾರನ್ನು ಮುಂದೆ ಚಾಲಿಸಿದ ಹಿನ್ನೆಲೆ ಹೆಚ್ಚಿನ ಧಾಳಿಯಿಂದ ಪಾರಾಗಿದ್ದಾರೆ. ಘಟನೆಯಿಂದ ಸತೀಶ್ ಅವರ ಭುಜದ ಭಾಗಕ್ಕೆ ಗಾಯವಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಮಸಗೋಡು ಗ್ರಾಮಕ್ಕೆ ತಿರುವು ತೆಗೆದುಕೊಳ್ಳುವ ಜಂಕ್ಷನ್ನಲ್ಲಿ ತಣ್ಣೀರುಹಳ್ಳದ ಕಡೆಯಿಂದ ಬೈಕ್ನಲ್ಲಿ ಆಗಮಿಸಿದ ಯುವಕರು ಕಾರನ್ನು ನಿಲ್ಲಿಸುವಂತೆ ಕೈಸನ್ನೆ ಮಾಡಿದ್ದಾರೆ. ಕಾರು ನಿಂತ ತಕ್ಷಣ ಹತ್ತಿರ ಬಂದ ಯುವಕ ‘ಮಡಿಕೇರಿಗೆ ರಸ್ತೆ ಯಾವುದು?’ ಎಂದು ಪ್ರಶ್ನಿಸುತ್ತಿದ್ದಂತೆ ಹಿಂಬದಿಯಿಂದ ಬಂದ ಯುವಕ ಸತೀಶ್ ಮೇಲೆ ಏಕಾಏಕಿ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಆಘಾತಗೊಂಡ ಸತೀಶ್ ಕಾರನ್ನು ಮುಂದೆ ಚಲಾಯಿಸುತ್ತಿದ್ದಂತೆ ಯುವಕರು ಎರಡು ಬೈಕ್ಗಳಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪರಿಚಿತರಿಂದ ಹಲ್ಲೆ ಪ್ರಕರಣ ದಾಖಲಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.