ಸೋಮವಾರಪೇಟೆ, ಜು. 27: ಬಲಿಷ್ಠ ಸಂಘಟನೆಯಿದ್ದರೆ ಮಾತ್ರ ಯಾವದೇ ಒಂದು ಜನಾಂಗ ಸಮಾಜದಲ್ಲಿ ನೆಲೆ ನಿಲ್ಲಲು ಸಾಧ್ಯ. ಈ ನಿಟ್ಟಿನಲ್ಲಿ ಕೊಡಗಿನಲ್ಲಿ ತುಳು ಭಾಷಿಕರ ಸಂಘಟನೆಯನ್ನು ಪ್ರಾರಂಭಿಸಲಾಗಿದ್ದು, ತುಳುವೆರ ಜಾನಪದ ಕೂಟ ಅಸ್ತಿತ್ವಕ್ಕೆ ಬಂದಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ ಹೇಳಿದರು.

ನಗರದ ಮಾನಸ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಘಟಕ ರಚನೆ ಬಗೆಗಿನ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ 2ಲಕ್ಷಕ್ಕೂ ಅಧಿಕ ಮಂದಿ ತುಳು ಭಾಷಿಕರಿದ್ದು, ಸಂಘಟನಾತ್ಮಕವಾಗಿ ಸದೃಢರಾಗಿಲ್ಲ. ಪರಿಣಾಮ ಸಾಮಾಜಿಕವಾಗಿ ಸಮುದಾಯ ಹಿಂದೆ ಬಿದ್ದಿದೆ. ಇದರಿಂದಾಗಿ ಸರ್ಕಾರದ ಯಾವದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ತುಳು ಭಾಷಿಕರ 8 ಸಮುದಾಯದವರು ಒಟ್ಟುಗೂಡಿ ಜಿಲ್ಲೆಯಲ್ಲಿ ತುಳುವೆರ ಜನಪದ ಒಕ್ಕೂಟವನ್ನು ರಚಿಸಲಾಗಿದೆ ಎಂದರು.

ಶ್ರೀಮಂತ ಸಂಸ್ಕøತಿಯ ತುಳು ಭಾಷಿಕರ ಆಚಾರ ವಿಚಾರಗಳನ್ನು ಮುಂದಿನ ತಲೆಮಾರಿಗೂ ಕೊಂಡೊಯ್ಯಬೇಕಿದೆ. ಭಾಷಿಕರ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ, ಸರ್ಕಾರ ದಿಂದ ಸಿಗುವ ಸವಲತ್ತುಗಳನ್ನು ಬಳಸಿಕೊಳ್ಳುವದು ಸೇರಿದಂತೆ ಹತ್ತು ಹಲವು ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ವಿವರಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಪಿ. ರವಿ ಮಾತನಾಡಿ, ಪ್ರಾಮಾಣಿಕತೆಗೆ ಹೆಸರಾಗಿರುವ ತುಳು ಭಾಷಿಕರು ಜಿಲ್ಲೆಯಲ್ಲಿ ಸಾಕಷ್ಟಿದ್ದರೂ, ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲೆಯಲ್ಲಿ ಮಾತ್ರ ಹೆಚ್ಚಾಗಿ ಪ್ರಚಲಿತದಲ್ಲಿರುವ ತುಳು ಭಾಷಿಕರ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಜಿಲ್ಲೆಯಲ್ಲಿ ಹಿಂದೆ ಬಿದ್ದಿದೆ. ಇದರೊಂದಿಗೆ ತುಳು ಅಕಾಡೆಮಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸೀಮಿತವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿಯೂ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಬೇಕು. ಆ ನಿಟ್ಟಿನಲ್ಲಿ ಒಕ್ಕೂಟ ಕಾರ್ಯನಿರ್ವಹಿಸಲಿದೆ ಎಂದರು.

ಸಮುದಾಯದ ಪ್ರಮುಖರಾದ ಬಿ.ಎಸ್. ಸದಾನಂದ್ ಮಾತನಾಡಿ, ತುಳು ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಉಳಿಸಲು ಎಲ್ಲರೂ ಇಂದಿನಿಂದಲೇ ಮುಂದಾಗಬೇಕು. ತುಳು ಭಾಷಿಕರ ಹಿಂದುಳಿದ ಜನಾಂಗವನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರಲು ಯೋಜನೆ ರೂಪಿಸಬೇಕೆಂದರು. ಸಭೆಯ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಶೇಖರ್ ಬಂಡಾರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಆನಂದ, ಬಂಟರ ಸಮಾಜದ ಅಧ್ಯಕ್ಷ ನಾರಾಯಣ ರೈ, ಆದಿ ದ್ರಾವಿಡ ಸಮಾಜದ ಅಧ್ಯಕ್ಷ ಓಂಕಾರಪ್ಪ, ಕುಲಾಲ್ ಸಮಾಜದ ಅಧ್ಯಕ್ಷ ನಾಣಯ್ಯ, ವಿಶ್ವಕರ್ಮ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಲೀಲಾರಾಂ, ಗಾಣಿಗ ಸಮಾಜದ ಅಧ್ಯಕ್ಷ ರಘು, ಪೂಜಾರಿ ಸಮಾಜದ ಬಿ.ಎಸ್. ಶ್ರೀಧರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.