ಕೂಡಿಗೆ, ಜು. 27: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆಯ ವತಿಯಿಂದ ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಾಗಾರ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹೆಗ್ಗಡಳ್ಳಿ ಗ್ರಾಮದ ಶ್ರೀ ರಾಮಮಂದಿರ ಆಶ್ರಮ ಶಾಲೆಯ ಆವರಣದಲ್ಲಿ ನಡೆಯಿತು.

ಕಾರ್ಯಾಗಾರವನ್ನು ಕೂಡಿಗೆ ಜಿ.ಪಂ. ಕ್ಷೇತ್ರದ ಸದಸ್ಯೆ ಮಂಜುಳಾ ಉದ್ಘಾಟಿಸಿ, ಮಾತನಾಡಿ, ಗ್ರಾಮಾಂತರ ಪ್ರದೇಶ ರೈತರು ಕೃಷಿಯಲ್ಲಿ ತೊಡಗುವದರ ಮೊದಲು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡುವ ಬಿತ್ತನೆ ಬೀಜಗಳ ಬಗ್ಗೆ ಪರಿಶೀಲನೆ ಹಾಗೂ ಕೀಟಗಳ ಬಾಧೆಯಿಂದ ತಪ್ಪಿಸಿಕೊಳ್ಳಲು ಉತ್ತಮವಾದ ಬೆಳೆಯನ್ನು ಬೆಳೆಯಲುa ಆಧುನಿಕ ತರಬೇತಿಗಳನ್ನು ಪಡೆಯುವದರ ಮೂಲಕ ತನ್ನ ಪ್ರಗತಿಯನ್ನು ಉನ್ನತೀಕರಿಸಬೇಕೆಂದರು.

ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮಲೀಲಾ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆಗಳಿಗೆ ಆವರಿಸುವ ಕೀಟಬಾಧೆಗಳಿಂದ ತಪ್ಪಿಸಿಕೊಳ್ಳಲು ಕ್ರಿಮಿನಾಶಕ ಔಷಧಿಗಳನ್ನು ಸಿಂಪಡಿಸಿ, ಬೆಳೆಯನ್ನು ಉತ್ತಮ ಗೊಳಿಸಿಕೊಳ್ಳಲು ಪ್ರಯತ್ನಿಸಿದರೂ ಪ್ರಾಯೋಗಿಕ ಕ್ರಮದಲ್ಲಿ ಔಷಧಿಗಳನ್ನು ಸಿಂಪಡಿಸದಿದ್ದರೇ ಬೆಳೆ ಸರಿಯಾದ ಮಟ್ಟಕ್ಕೆ ಬರುವದಿಲ್ಲ ಎಂದು ತಿಳಿಸಿದರು.

ಗೋಣಿಕೊಪ್ಪ ಕೆ.ವಿ.ಕೆ. ರೋಗ ತಜ್ಞ ಡಾ. ವಿರೇಂದ್ರ ಕುಮಾರ್ ಉಪನ್ಯಾಸ ನೀಡಿ, ರೈತರು ಬೀಜೋಪಚಾರ ಮಾಡುವ ಮೊದಲು ಆಧುನಿಕ ಮಾದರಿಯ ಬೀಜೋಪಚಾರ ಮಾಡಿ ಬಿತ್ತನೆ ಮಾಡಿದಲ್ಲಿ ಯಾವದೇ ಕೀಟಬಾಧೆ ಬಾಧಿಸುವದಿಲ್ಲ. ಅಲ್ಲದೆ, ಸುರಕ್ಷಿತ ಕೀಟ ನಾಶಕ ಔಷಧಿಗಳನ್ನು ಅಳತೆಗನುಗುಣವಾಗಿ ಬಳಕೆ ಮಾಡಿ, ತಮ್ಮ ಜಮೀನಿನಲ್ಲಿ ಸಂರಕ್ಷವಾಗಿ ಬೆಳೆ ಬೆಳೆಯಲು ರೈತರು ತೊಡಗಿಸಿಕೊಳ್ಳಬೇಕು. ಇಲಾಖೆ ವತಿಯಿಂದ ಕೃಷಿಗೆ ಸಂಬಂಧಪಟ್ಟಂತೆ ವಿವಿಧ ಯೋಜನೆಗಳ ಮೂಲಕ ಅನೇಕ ಆಧುನಿಕ ಸಲಕರಣೆಗಳನ್ನು ಪಡೆದು ಸದ್ಬಳಿಸಿಕೊಳ್ಳಬೇಕೆಂದು ರೈತರಿಗೆ ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲೂಕು ಪಂಚಾಯಿತಿ ಸದಸ್ಯೆ ಸಬಿತ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪಿ.ಸಿ. ಪೂಣಚ್ಚ, ಜಿಲ್ಲಾಮಟ್ಟದ ಆತ್ಮಯೋಜನೆಯಾಧಿಕಾರಿ ಮಂಜುನಾಥ್ ವೇದಿಕೆಯಲ್ಲಿದ್ದರು. ಕಾರ್ಯಾಗಾರದಲ್ಲಿ ಸುತ್ತಮುತ್ತಲ ಗ್ರಾಮಗಳ 70ಕ್ಕೂ ಅಧಿಕ ರೈತರುಗಳು ಪಾಲ್ಗೊಂಡು ಬೀಜೋಪಚಾರದ ಮಾಹಿತಿ ಪಡೆದರು. ಪಿ.ಸಿ. ಪೂಣಚ್ಚ ಸ್ವಾಗತಿಸಿ, ವಂದಿಸಿದರು.