ಮಡಿಕೇರಿ, ಆ. 15: ಪ್ರವಾಸೋದ್ಯಮ ಇಲಾಖೆಯು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಹಾಗೂ ರಾಜ್ಯದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿ ಪ್ರವಾಸಿಗರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೋಂ-ಸ್ಟೇ ಎಂಬ ಪ್ರವಾಸೋದ್ಯಮ ಉತ್ಪನ್ನವನ್ನು ಜಾರಿಗೆ ತಂದಿದೆ.

ಪ್ರವಾಸೋದ್ಯಮ ನೀತಿಯ 2015-20ರ ಅಡಿಯಲ್ಲಿ ಹೋಂಸ್ಟೇ ನೋಂದಣಿ ಮಾರ್ಗಸೂಚಿಗಳನ್ನು ಹೊರಡಿಸಿ, ಇದರಲ್ಲಿ ನಿಗದಿ ಪಡಿಸಿರುವ ಎಂಪ್ಯಾನಲ್ಡ್ ರೇಟಿಂಗ್ ಏಜೆನ್ಸಿಗಳ ಮೂಲಕ ಶ್ರೇಣಿ ಪ್ರಮಾಣ ಪತ್ರವನ್ನು ಪಡೆದು ಹೋಂಸ್ಟೇ ನೋಂದಾಯಿಸಬೇಕಿದೆ.

ಕೊಡಗು ಜಿಲ್ಲೆಯಲ್ಲಿ ಹೋಂಸ್ಟೇ ನಡೆಸಲು ಇಚ್ಛಿಸುವ ಮಾಲೀಕರು ಪ್ರವಾಸೋದ್ಯಮ ಇಲಾಖೆಯ ಮಾರ್ಗಸೂಚಿಯಂತೆ ಸರ್ಕಾರದಿಂದ ಅನುಮೋದನೆಗೊಂಡಿರುವ ರೇಟಿಂಗ್ ಏಜೆನ್ಸಿಗಳ ಮುಖಾಂತರ ಹೋಂಸ್ಟೇ ಗಳನ್ನು ನೋಂದಾಯಿಸಬೇಕಿದೆ.

ಪ್ರವಾಸೋದ್ಯಮ ಇಲಾಖೆಯು ನಿಗದಿಪಡಿಸಿರುವ ಎಂಪ್ಯಾನಲ್ಡ್ ರೇಟಿಂಗ್ ಏಜೆನ್ಸಿಗಳ ವಿವರ ಇಂತಿದೆ:- ಬ್ರಿಕ್ ವರ್ಕ್ ರೇಟಿಂಗ್ ಪ್ರೈವೇಟ್ ಲಿ, ಬೆಂಗಳೂರು ದೂ.ಸಂ 080-8884498570/73, ಇಂಡಿಕಾ ರೇಟಿಂಗ್ ಮತ್ತು ರಿಸರ್ಚ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ದೂ.ಸಂ. 8046666810, ಸ್ಮೇರ ರೇಟಿಂಗ್ ಲಿಮಿಟೆಡ್, ಚೆನೈ, ದೂ.ಸಂ 9820802479,9930074009, ಕ್ರೆಡಿಟ್ ಅನಲೈಸಿಸ್ ಎಂಡ್ ರಿಸರ್ಚ್ ಲಿಮಿಟೆಡ್, ಬೆಂಗಳೂರು ದೂ.ಸಂ 9900041975,9538134545.

2015-20ರ ಪ್ರವಾಸೋದ್ಯಮ ನೀತಿಯಡಿ ಹೋಂ- ಸ್ಟೇ ನೋಂದಣಿ ಮಾರ್ಗಸೂಚಿಗಳು: ಯಾವದೇ ಏಕವ್ಯಕ್ತಿ ಅಥವಾ ಕುಟುಂಬವು ನಡೆಸಲು ಉದ್ದೇಶಿಸಿರುವ ಹೋಂಸ್ಟೇ ಘಟಕವು ಎಲ್ಲಿ ಕಾರ್ಯ ನಿರ್ವಹಿಸುತ್ತಿದೆಯೋ/ ಕಾರ್ಯ ನಿರ್ವಹಿಸಲು ಉದ್ದೇಶಿಸಲಾಗಿದೆಯೋ ಆ ಆಸ್ತಿಯ ಮಾಲೀಕರಾಗಿರಬೇಕು.

ಹೋಂಸ್ಟೇ ಘಟಕವು ಉತ್ತಮ ಗುಣಮಟ್ಟದ ಶೌಚಾಲಯಗಳನ್ನು ಹೊಂದಿಕೊಂಡಿರುವಂತೆ ಗರಿಷ್ಠ ಐದು (5) ಹಾಗೂ ಕನಿಷ್ಟ ಮೂರು (3) ಕೊಠಡಿಗಳನ್ನು ಕೇವಲ ಪ್ರವಾಸಿಗರ ವಸತಿಗಾಗಿಯೇ ಹೊಂದಿರಬೇಕು. ಉತ್ತಮ ಗುಣಮಟ್ಟ ಹೊಂದಿರುವ ಹಾಗೂ ಸುಗಮ ವಾಹನ ಸಂಚಾರಕ್ಕೆ ಅಗತ್ಯವಾದ ರಸ್ತೆ ಸಂಪರ್ಕವನ್ನು ಸದರಿ ಹೋಂಸ್ಟೇ ಹೊಂದಿರಬೇಕು. ಪ್ರಸ್ತಾಪಿತ ಹೋಂ-ಸ್ಟೇಯು ಹೊಟೇಲ್ ಅಥವಾ ವಾಣಿಜ್ಯ ಸಂಸ್ಥೆಯೆಂದು ನೋಂದಣಿ ಯಾಗಿರತಕ್ಕದ್ದಲ್ಲ ಹಾಗೂ ಹೊಟೇಲ್ ಗಳಿಗೆ ಲಭ್ಯವಿರುವ ಯಾವದೇ ಲಾಭಗಳನ್ನು ರಾಜ್ಯ ಅಥವಾ ಕೇಂದ್ರ ನೀತಿ/ಕಾಯಿದೆ/ಮಾರ್ಗ ಸೂಚಿಗಳ ಅನ್ವಯ ಪಡೆದಿರಬಾರದು.

ಹೋಂಸ್ಟೇಯಲ್ಲಿರುವ ಕೊಠಡಿಗಳ ವಿಸ್ತೀರ್ಣವು ಪ್ರವಾಸಿಗರು ಆರಾಮದಾಯಕವಾಗಿ ತಂಗಲು ಹಾಗೂ ಸುಗಮ ಸಂಚಾರಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ಹೊಂದಿರಬೇಕು. ಹೋಂಸ್ಟೇಯ ಸ್ನಾನಗೃಹದ ವಿಸ್ತೀರ್ಣವು ಸಾಕಷ್ಟು ಸ್ಥಳಾವಕಾಶ ವನ್ನು ಹೊಂದಿರಬೇಕು. ಹೋಂ-ಸ್ಟೇಯ ಮಾಲೀಕರು ತನ್ನಲ್ಲಿರುವ ಸೌಲಭ್ಯಗಳು ಮತ್ತು ಇವುಗಳ ಬಳಕೆಗಾಗಿ ಪಾವತಿಸಬೇಕಾದ ದರಗಳನ್ನು ಅತಿಥಿಗಳಿಗೆ ನಿಖರವಾಗಿ ವಿವರಿಸಬೇಕು. ಹೋಸ್ಟೇ ಘಟಕವು ಎಲ್ಲಾ ಸಮಯದಲ್ಲಿ ವಾಸಸ್ಥಳವನ್ನು ಅತಿಥಿಗಳಿಗೆ ಉತ್ತಮ ಸ್ಥಿತಿಯಲ್ಲಿ ಮತ್ತು ಶುಚಿಯಾಗಿಡತಕ್ಕದ್ದು. ಇದಲ್ಲದೆ ಗುಣಮಟ್ಟದ ಆರೋಗ್ಯ, ನೈರ್ಮಲ್ಯ ಮತ್ತು ಅಗ್ನಿ ಸುರಕ್ಷತೆಯನ್ನು ಒಳಗೊಂಡಂತೆ ನಿಯಮಾನುಸಾರ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸತಕ್ಕದ್ದು. ಪ್ರತಿ ಹೋಂ-ಸ್ಟೇಯು ಅತಿಥಿಗಳ ವಿವರದ ಬಗ್ಗೆ ಒಂದು ನೋಂದಣಿ ಪುಸ್ತಕವನ್ನು ಹಾಗೂ ಎಲೆಕ್ಟ್ರಾನಿಕ್ ಮಾಧÀ್ಯಮದ ಮೂಲಕ ಗಣಕೀಕರಣ ಮಾಡುವದು ಅವಶ್ಯವಾಗಿರುತ್ತದೆ.

ಪ್ರತಿ ಅನುಮೋದಿತ ಹೋಂಸ್ಟೇಯ ಘಟಕವು ಈ ಕೆಳಕಂಡ ಪುಸ್ತಕ ಮತ್ತು ನೋಂದಣಿ ವಹಿಗಳನ್ನು ಇಡತಕ್ಕದ್ದು. ಹೋಂಸ್ಟೇ ಘಟಕದ ಸ್ವಾಗತ ಕೊಠಡಿ/ ಮುಖ್ಯದ್ವಾರ/ ಕಾಯ್ದಿರಿಸುವ ಕೊಠಡಿಯಲ್ಲಿ ದೂರು/ಸಲಹೆ ಪುಸ್ತಕ. ಭೇಟಿ ನೀಡುವ ಅತಿಥಿ/ ಪ್ರವಾಸಿಗರ ನೋಂದಣಿ ಪುಸ್ತಕ ಸಂಖ್ಯೆಯನ್ನು ಹೊಂದಿರುವ ತ್ರಿಪ್ರತಿಯ ಬಿಲ್ ಪುಸ್ತಕ ಸಂಖ್ಯೆಯನ್ನು ಹೊಂದಿರುವ ದ್ವಿಪ್ರತಿಯ ಪಾವತಿ/ ಮುಂಗಡ ಸ್ವೀಕೃತಿಯ ಪುಸ್ತಕ ಕನಿಷ್ಟ 250 ಮೀಟರ್‍ಗಳ ದೂರದಿಂದ ಸ್ಪಷ್ಟವಾಗಿ ಕಾಣುವಂತೆ ಪ್ರವಾಸೋದ್ಯಮ ಇಲಾಖೆಯ ಲಾಂಛನವನ್ನು ಒಳಗೊಂಡಂತೆ “ಕರ್ನಾಟಕ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆ ಗೊಂಡಿದೆ” ಎಂಬ ನಾಮಫಲಕವನ್ನು ಹೋಂಸ್ಟೇ ಘಟಕವನ್ನು ಸಂಪರ್ಕಿಸುವ ಕಟ್ಟಡದ ಮುಖ್ಯ ದ್ವಾರದ ಬಳಿ ಅಳವಡಿಸತಕ್ಕದ್ದು. ಎಂಪ್ಯಾನಲ್ಡ್ ರೇಟಿಂಗ್ ಏಜೆನ್ಸಿ ನೀಡಿರುವ ಶ್ರೇಣಿ ಪ್ರಮಾಣ ಪತ್ರದ ಸಂಖ್ಯೆಯನ್ನು ನಾಮಫಲಕದಲ್ಲಿ ಪ್ರದರ್ಶಿಸತಕ್ಕದ್ದು.

ಜಿಲ್ಲೆಯಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ 2009-14ರ ಪ್ರವಾಸೋದ್ಯಮ ನೀತಿಯಡಿ ನೋಂದಣಿಯಾದ ಹೋಂಸ್ಟೇಗಳು ಮೇಲ್ಕಾಣಿಸಿದ 2015-20ರ ಪ್ರವಾಸೋದ್ಯಮ ನೀತಿಯ ಮಾರ್ಗಸೂಚಿಗಳ ಅನ್ವಯ ನೋಂದಣಿ ಮಾಡಿಕೊಳ್ಳಲು ಸೂಚಿಸಿದೆ. ಹೆಚ್ಚಿನ ಮಾಹಿತಿಯನ್ನು hಣಣಠಿ://ಞಚಿಡಿಟಿಚಿಣಚಿಞಚಿಣouಡಿism.oಡಿg/ ಅಂತರ್ಜಾಲ ತಾಣದಲ್ಲಿ ಪಡೆಯ ಬಹುದಾಗಿರುತ್ತದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.