ಮಡಿಕೇರಿ, ಜೂ. 26: ಹಸಿರಿನ ತಾಣ, ಪ್ರವಾಸಿಗರಿಗೆ ಸ್ವರ್ಗದ ಬೀಡು ಕೊಡಗು. ಪ್ರವಾಸೋದ್ಯಮ ಕ್ಷೇತ್ರವಾಗಿ ಬೆಳೆಯುತ್ತಿರುವ ಕೊಡಗು ಜಿಲ್ಲೆಯಲ್ಲಿ ಪ್ರವಾಸಿಗರಿಗಿಲ್ಲ ಮೂಲ ಸೌಲಭ್ಯ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿ ಪ್ರವಾಸಿಗರು ‘ವೀಕೆಂಡ್’ ಮಜಾ ಅನುಭವಿಸುತ್ತಿದ್ದರೆ, ಪಾದಚಾರಿಗಳು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿಯಿದೆ.

ಮಡಿಕೇರಿ ನಗರದಲ್ಲಿ ಪ್ರವಾಸಿಗರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಿದ್ದು, ಪ್ರವಾಸಿಗರ ವಾಹನ ನಿಲುಗಡೆಗೆ ಪಾರ್ಕಿಂಗ್ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ಹೊಟೇಲ್ ಹಾಗೂ ಸಂಬಾರ ಪದಾರ್ಥಗಳ ಮಳಿಗೆಗಳ ಮುಂದೆ ವಾಹನಗಳ ಸಾಲೇ ನಿಂತಿರುವದರಿಂದ ಮತ್ತು ವಾಹನಗಳು ಅಡ್ಡಾದಿಡ್ಡಿ ಚಲಿಸುವದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.

ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಕೈಗಾರಿಕಾ ಬಡಾವಣೆ, ರೇಸ್‍ಕೋರ್ಸ್ ರಸ್ತೆಯತ್ತ ತೆರಳಬೇಕಾದರೆ ಪಾದಚಾರಿಗಳು ವೀಕೆಂಡ್ ದಿನಗಳಲ್ಲಿ ಹರಸಾಹಸವನ್ನೇ ಪಡಬೇಕಾಗಿದೆ. ವಾರದ ಕೊನೇ ದಿನಗಳಾದ ಶನಿವಾರ ಹಾಗೂ ಭಾನುವಾರಗಳಂದು ಜಿಲ್ಲೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಮಡಿಕೇರಿ ನಗರಕ್ಕೆ ಸಾಗರೋಪಾದಿಯಲ್ಲಿ ಬರುವ ಪ್ರವಾಸಿಗರು ನಗರದ ಹೊಟೇಲ್ ಹಾಗೂ

ಸಂಬಾರ ಪದಾರ್ಥಗಳ ಖರೀದಿಯಲ್ಲಿ ತೊಡಗಿಕೊಳ್ಳುತ್ತಾರೆ. ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಕೈಗಾರಿಕಾ ಬಡಾವಣೆಯತ್ತ ಸಂಚರಿಸುವ ರಸ್ತೆಯಲ್ಲಿ ಹೆಚ್ಚಿನ ಪ್ರವಾಸಿ ವಾಹನ ನಿಲ್ಲಿಸುವದು ಮತ್ತು ತೆಗೆಯುವದು ಮಾಡುವದರಿಂದ ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಸಂಕಷ್ಟವನ್ನೆದುರಿಸುತ್ತಿದ್ದಾರೆ. ರಸ್ತೆಯಲ್ಲಿ ಸಾಗುವ ಪಾದಚಾರಿಗಳು, ವಾಹನ ಚಾಲಕರು ಮತ್ತು ಸಂಚಾರಿ ಪೊಲೀಸರನ್ನು ಶಪಿಸುತ್ತಾ ಕಷ್ಟಪಟ್ಟು ಸಾಗುತ್ತಾರೆ.ಪ್ರವಾಸಿಗರಿಗೆ ವಾಹನ ಪಾರ್ಕಿಂಗ್‍ಗೆ ಸೂಕ್ತ ಸ್ಥಳಾವಕಾಶವನ್ನು ಮಾಡಿಕೊಡುವದರೊಂದಿಗೆ ರಸ್ತೆಯಲ್ಲಿ ಸಾಗುವ ಪಾದಚಾರಿಗಳಿಗೂ ಯಾವದೇ ತೊಂದರೆಯಾಗದಂತೆ ನಗರಸಭೆ ಹಾಗೂ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಪಾದಚಾರಿಗಳ ಆಶಯವೂ ಕೂಡ ಇದೆ ಆಗಿದೆ. -ಚಂದ್ರ