ಶ್ರೀಮಂಗಲ, ಅ. 20: ಕಲಾವಿದ ನಾಟಕ ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವದರಿಂದ ಮನುಷ್ಯನಲ್ಲಿರುವ ವಿಚಾರಧಾರೆಗಳು ಬದಲಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುವದರ ಜೊತೆಯಲ್ಲಿ ಸಮಾಜವನ್ನು ಪ್ರೀತಿಸುವ ವ್ಯಕ್ತಿಯಾಗಿ, ಸಹನೆ, ಸಂವೇದನೆಯ ಗುಣದೊಂದಿಗೆ ಪರಿಪೂರ್ಣವಾದ ವ್ಯಕ್ತಿತ್ವವನ್ನು ಹೊಂದಲು ಸಾಧ್ಯ ಎಂದು ಕರ್ನಾಟಕ ಕೊಡವ ಸಾಹಿತ್ಯ ಆಕಾಡೆಮಿ ಸದಸ್ಯ ಮಾದೇಟಿರ ಬೆಳ್ಯಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಆಕಾಡೆಮಿ ವತಿಯಿಂದ ಪೊನ್ನಂಪೇಟೆ ಯಲ್ಲಿ ನಡೆಯುತ್ತಿರುವ ನಾಟಕ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ನಾಟಕ ಎಂದರೆ ಹೊರ ಜಗತ್ತು ತಿಳಿದಿರುವಂತೆ ಅಲ್ಲ. ನಾಟಕ ಮನುಷ್ಯನಲ್ಲಿರುವ ಆಂತರಿಕ ಗುಣವನ್ನು ಹೊರಗೆಡುವ ದರೊಂದಿಗೆ ನಮ್ಮ ಜೊತೆಗಾರ ರೊಂದಿಗೆ ಮತ್ತು ನೆರೆಕರೆಯವ ರೊಂದಿಗೆ ಯಾವ ರೀತಿ ಬಾಳ ಬೇಕು, ವಿಷಮ ಪರಿಸ್ಥತಿಯಲ್ಲೂ ನಮ್ಮ ಆತ್ಮ ಸ್ಥೈರ್ಯವನ್ನು ಕಳೆದುಕೊಳ್ಳದ ರೀತಿಯಲ್ಲಿ ಸಮಾಜದಲ್ಲಿ ಬಾಳುವದನ್ನು ಕಲಿಸುವದರೊಂದಿಗೆ ಮನುಷ್ಯನಿಗೆ ಮುಖ್ಯವಾಗಿ ಬೇಕಾದ ಹಾಸ್ಯ ಪ್ರಜ್ಞೆಯನ್ನು ಬೆಳೆಸುತ್ತದೆ ಎಂದು ತಿಳಿಸಿದರು.
ಹಿಂದಿನಿಂದಲು ಪೊನ್ನಂಪೇಟೆ ಕ್ಷೇತ್ರ ನಾಟಕ ರಂಗಕ್ಕೆ ಬಹು ಕಾಣಿಕೆಯನ್ನು ನೀಡಿದ್ದು, ಸೃಷ್ಟಿ ಕೊಡಗು ರಂಗದ ಯಶಸ್ಸಿಗೆ ಈ ಕ್ಷೇತ್ರವೇ ಮೂಲ ಕಾರಣ ಎಂದ ಅವರು ತಮ್ಮ ಮತ್ತು ಸೃಷ್ಟಿಕೊಡಗು ರಂಗದ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗೋಣಿಕೊಪ್ಪಲು ಗ್ರಾ.ಪಂ. ಮಾಜಿ ಅಧ್ಯಕ್ಷೆ ಕುಲ್ಲೇಟಿರ ಪ್ರವೀ ಮೊಣ್ಣಪ್ಪ ಹಿಂದಿನ ಕಾಲದಲ್ಲಿ ಮನೋರಂಜನೆಗಾಗಿ ನಾಗರಿಕರು ನಾಟಕವನ್ನೇ ಅವಲಂಭಿಸಿದ್ದು, ಉತ್ತಮ ಕಥಾ ಅಭಿನಯದಿಂದ ನೋಡುಗರಲ್ಲಿ ಉತ್ತಮ ಭಾವನೆಗಳನ್ನು ಮೂಡಿಸುತ್ತಿದ್ದವು. ಆದರೆ ಇಂದಿನ ಸಮಾಜದಲ್ಲಿ ಮನೋರಂಜನೆಗೆ ವಿವಿಧ ಅಯಾಮಗಳು ಬಂದು ವಿಷಯಗಳು ಮನಸ್ಸಿನ ಸ್ಥೀಮಿತವನ್ನು, ಸ್ವಾಸ್ಥ್ಯವನ್ನು ಹಾಳು ಮಾಡುವ ಕಾರ್ಯಕ್ರಮಗಳಾಗಿ ರೂಪು ಗೊಳ್ಳುತ್ತಿರುವದು ದುಃಖಕರ ಎಂದು ಹೇಳಿದರು. ಯುವ ಪೀಳಿಗೆಗೆ ಉತ್ತಮ ಸಮಾಜಮುಖಿಯಾದ ಯಾವದೇ ಕಾರ್ಯಕ್ರಮಗಳು ಇಷ್ಟವಾಗುವದಿಲ್ಲ; ಕೇವಲ ಮೊಬೈಲ್ ಇದ್ದರೆ ಸಾಕು ಎಂಬ ಮನೋಭಾವನೆಯನ್ನು ಯುವ ಸಮುದಾಯ ದೂರ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಅಕಾಡೆಮಿ ವತಿಯಿಂದ ಭಾಷೆಯ ಬೇಳವಣಿಗೆ, ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಕಾಡೆಮಿಯ ಘನತೆಯನ್ನು ಎತ್ತಿ ಹಿಡಿಯಲಾಗುವದು ಎಂದು ಹೇಳಿದರು.
ಕೊಡಗಿನಲ್ಲಿ ಮತ್ತೆ ನಾಟಕ ರಂಗವು ತನ್ನ ಗತವೈಭವನ್ನು ಕಾಣುವ ನಿಟ್ಟಿನಲ್ಲಿ ಕಲಾವಿದರು ತಮ್ಮ ನಾಟಕದ ಬಗೆಗಿನ ಬದ್ಧತೆಯನ್ನು ತೋರಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರವತ್ತೋಕ್ಲು ಗ್ರಾ.ಪಂ. ಸದಸ್ಯ ಮನೆಯಪಂಡ ಬೋಪಣ್ಣ, ವೀರಾಜಪೇಟೆ ಯುವ ಒಕ್ಕೂಟದ ಅಧ್ಯಕ್ಷೆ ಶೀಲಾ ಬೋಪಣ್ಣ, ನಾಟಕ ಶಿಬಿರದ ಸಂಚಾಲಕ ಮತ್ತು ಅಕಾಡೆಮಿ ಸದಸ್ಯ ಮದ್ರೀರ ಸಂಜು ಬೆಳ್ಯಪ್ಪ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ನಾಟಕ ಪಡಿಪು ಶಿಬಿರದ ನಿರ್ದೇಶಕ ಚೆಟ್ಟಂಗಡ ರವಿ ಸುಬ್ಬಯ್ಯ ಸ್ವಾಗತಿಸಿ, ವಂದಿಸಿದರು.