ಮೂರ್ನಾಡು, ಜ. 27: ಪಾಲೇಮಾಡುವಿನ ನಿರಾಶ್ರಿತ ಕುಟುಂಬದವರು ಹಿಂದಿನಿಂದಲೂ ಬಳಸಿಕೊಂಡು ಬಂದ ಸ್ಮಶಾನ ಜಾಗವನ್ನು ದುರಸ್ತಿ ಪಡಿಸಿಕೊಡುವಂತೆ ಆಗ್ರಹಿಸಿ ನಿವಾಸಿಗಳು ಸ್ಮಶಾನದಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸಿ ಭರವಸೆ ಮೇರೆಗೆ ಸತ್ಯಾಗ್ರಹವನ್ನು ಕೈಬಿಟ್ಟಿದಾರೆ.ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡುವಿನ ಪೈಸಾರಿ ಜಾಗದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಸರ್ವೆ ನಂ. 167/1ಎ ರಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ 12.70 ಏಕರೆ ಜಾಗವನ್ನು ನೀಡಲಾಗಿದೆ.
ಪಾಲೇಮಾಡುವಿನ ನಿರಾಶ್ರಿತ ಕುಟುಂಬಗಳು ಮೊದಲಿನಿಂದಲೂ ಬಳಸಿಕೊಂಡು ಬಂದಿದ್ದ ಸ್ಮಶಾನ ಜಾಗವನ್ನು ದುರಸ್ತಿ ಪಡಿಸಿಕೊಡುವಂತೆ ಸುಮಾರು 60ಕ್ಕೂ ಅಧಿಕ ನಿವಾಸಿಗಳು ಸ್ಟೇಡಿಯಂ ಜಾಗದಲ್ಲಿರುವ ಸ್ಮಶಾನದಲ್ಲಿ ಶೆಡ್ ನಿರ್ಮಿಸಿ ಬೆಳಿಗ್ಗೆಯಿಂದ ಉಪವಾಸ ಸತ್ಯಾಗ್ರಹ ನಡೆಸಿದರು. ಬಹುಜನ ಕಾರ್ಮಿಕ ಸಂಘದ ರಾಜ್ಯ ಉಪಾಧ್ಯಕ್ಷ ಹೆಚ್.ಕೆ. ಮೊಣ್ಣಪ್ಪ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದು, ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಿ ಸಮಸ್ಯೆಯನ್ನು ಪರಿಹರಿಸುವವರೆಗೂ ಸತ್ಯಾಗ್ರಹವನ್ನು ಕೈಬಿಡುವದಿಲ್ಲ ಎಂದು ಪ್ರತಿಭಟನಾಕಾರರು ಹೇಳಿದರು. ಬಳಿಕ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರ ಭರವಸೆ ಮೇರೆಗೆ ಸತ್ಯಾಗ್ರಹವನ್ನು ಸಂಜೆ ಕೈ ಬಿಡಲಾಯಿತು. ಉಸ್ತುವಾರಿ ಸಚಿವರು ಫೆಬ್ರವರಿ 2ರಂದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಪರಿಹರಿಸುವದಾಗಿ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಅವರಿಗೆ ತಿಳಿಸಿದ್ದಾರೆ. ಆದ್ದರಿಂದ ಫೆ. 2 ರವರಗೆ ಗಡುವು ನೀಡುತ್ತೇವೆ, ಇಲ್ಲವಾದಲ್ಲಿ ಮುಂದೆ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವದಾಗಿ ಹೆಚ್.ಕೆ. ಮೊಣ್ಣಪ್ಪ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷ ಬೆಂಬಲ: ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ರಾಬಿನ್ ಮ್ಯಾಥ್ಯು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಸರ್ಕಾರ ಜನರಿಗೆ ನೀಡುವಂತಹ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಪ್ರಜೆಗಳಿಗೆ ಮತದಾನದ ಹಕ್ಕು ಮಾತ್ರ ಮೊದಲು ನೀಡುತ್ತಿದ್ದು ಇತರ ಸೌಲಭ್ಯ ಗಳನ್ನು ಒದಗಿಸುತ್ತಿಲ್ಲ.
ಇವುಗಳನ್ನು ಪಡೆದುಕೊಳ್ಳುವಲ್ಲಿ ಹೋರಾಟ ಅಗತ್ಯವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿ ತಮ್ಮ ಹೋರಾಟಕ್ಕೆ ಬೆಂಬಲವನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಸಮಾಜವಾದಿ ಪಕ್ಷದ ಮೈಸೂರು ಜಿಲ್ಲಾಧ್ಯಕ್ಷ ರಾಮಣ್ಣ, ಬೆಂಗಳೂರು ಯೂತ್ ಅಧ್ಯಕ್ಷ ಕಿರಣ್, ಕರ್ನಾಟಕ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಅಪ್ಪಾಜಿ ಇನ್ನಿತರರು ಭೇಟಿ ನೀಡಿದ್ದರು.