ಮಡಿಕೇರಿ, ಜ. 27: ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೋಂದಣಿ ಮಾಡಿ, ಮತದಾನದ ಗುರುತಿನ ಚೀಟಿ ಪಡೆದು ಚುನಾವಣಾ ಸಂದರ್ಭದಲ್ಲಿ ಮತ ಚಲಾಯಿಸುವ ಮೂಲಕ ಬಲಿಷ್ಠ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈ ಜೋಡಿಸುವಂತೆ ಯುವ ಮತದಾರರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಕರೆ ನೀಡಿದ್ದಾರೆ.
ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಗರದ ಜೂನಿಯರ್ ಕಾಲೇಜಿನ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಪೂರ್ವಭಾವಿಯಾಗಿ ಯುವ ಮತ್ತು ಭಾವಿ ಮತದಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಜನರಿಂದ, ಜನರಿಗಾಗಿ ಜನರಿಗೋಸ್ಕರ ಆಡಳಿತ ನಡೆಸುವ ವ್ಯವಸ್ಥೆ ಇದೆ. ಆ ದಿಸೆಯಲ್ಲಿ ಪ್ರಜಾಪ್ರಭುತ್ವವನ್ನು ಬಲಗೊಳಿಸಲು ಯುವ ಮತದಾರರು ಮುಂದಾಗಬೇಕಿದೆ.
ಮತದಾರರ ಪ್ರತಿಯೊಂದು ಮತವು ಅಮೂಲ್ಯವಾಗಿದ್ದು, ಇದನ್ನು ಅರಿತು ಚುನಾವಣಾ ಸಂದರ್ಭದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕು. 18 ವರ್ಷ ಮೇಲ್ಪಟ್ಟವರು ಮತದಾನದಿಂದ ವಂಚಿತರಾಗಬಾರದು ಎಂದು ನುಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ ಮಾತನಾಡಿ, ಹದಿನೆಂಟು ವರ್ಷ ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾರರ ಚೀಟಿ ಪಡೆದು ಮತ ಚಲಾಯಿಸುವಂತಾಗಬೇಕು. ಮತದಾನ ಮಾಡಲು ಹಿಂಜರಿಕೆ ಪಡಬಾರದು. ಅರ್ಹರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಬೇರನ್ನು ಗಟ್ಟಿಗೊಳಿಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯ ಚುನಾವಣಾ ಶಿರಸ್ತೆದಾರ್ ಟಿ.ಕೆ. ಪ್ರಕಾಶ್, ಪವರ್ ಪಾಯಿಂಟ್ ಮೂಲಕ ಮತದಾನ ಮಹತ್ವದ ಮಾಹಿತಿ ನೀಡಿದರು. ಪ್ರಾಧ್ಯಾಪಕರಾದ ಶಶಿಧರ, ಅನಿಲ್ ಕುಮಾರ್, ಸಿನೋಜ್, ವಿದ್ಯಾರ್ಥಿಗಳು ಇದ್ದರು.