ಸುಂಟಿಕೊಪ್ಪ, ನ. 24: ಒಂದೆಡೆ ರೂ. 500 ಹಾಗೂ ರೂ. 1000 ಮುಖಬೆಲೆಯ ಹಳೆಯ ನೋಟು ಬದಲಾಯಿಸಲು ಶ್ರೀಸಾಮಾನ್ಯರು ಹೈರಾಣಾಗಿದ್ದರೆ ಸರಕಾರ ವಿತರಿಸುವ ಪಡಿತರ ಆಹಾರ ಸಾಮಗ್ರಿ ತಿನ್ನಲು ಯೋಗ್ಯವಲ್ಲದಾಗಿದೆ. ಒಟ್ಟಾರೆ ಸರಕಾರದ ಬದಲಾವಣೆಯ ‘ಪರ್ವದಿಂದ’ ಬಡವರ ಬದುಕು ಮೂರಾಬಟ್ಟೆಯಾಗಿದೆ.
ಸರಕಾರ ಏನೇ ಯೋಜನೆ ಜಾರಿಗೆ ತಂದರೂ ಆದರ ಮುಖ್ಯ ಉದ್ದೇಶ ಜನರ ಹಿತ ಕಾಪಾಡುವದು ಹಾಗೂ ಅಭಿವೃದ್ಧಿ ಜಪವಾಗಿದ್ದರೂ ಸದ್ಯದ ಮಟ್ಟಿಗೆ ರೂ. 500 ಹಾಗೂ ರೂ. 1000 ಹಳೆಯ ನೋಟಿನ ಬದಲಾವಣೆಗಾಗಿ ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಪರದಾಡುವಂತಾಗಿರುವದು ತಪ್ಪಿಲ್ಲ.
ಕೇಂದ್ರ ಸರಕಾರ ರೂ. 2000 ಮುಖ ಬೆಲೆಯ ನೋಟನ್ನು ಚಾಲ್ತಿಗೆ ತಂದಿದೆ. ಆದರೆ, ಹೊಸ ರೂ. 500 ನೋಟು ಇನ್ನೂ ಬ್ಯಾಂಕಿಗೆ ತಲಪದೆ ಇರುವದರಿಂದ ಕಿರಿಕಿರಿ ತಂದಿದೆ. ತೋಟದ ಮಾಲೀಕರುಗಳು, ಬಿಲ್ಡಿಂಗ್ ಕೆಲಸದ ಗುತ್ತಿಗೆದಾರರು ವಾರದ ಬಟವಾಡೆಗೆ ಹಳೆಯ ರೂ. 1000 ಹಾಗೂ ರೂ. 500 ನೋಟು ಅಲ್ಲದೆ ಹೊಸದಾಗಿ ಬಿಡುಗಡೆಗೊಂಡ ರೂ. 2000 ನೋಟನ್ನು ಕಾರ್ಮಿಕರಿಗೆ ನೀಡುವದರಿಂದ ಕಾರ್ಮಿಕರು ಸಮಸ್ಯೆಗೆ ಸಿಲುಕಿದ್ದಾರೆ. ಈ ನೋಟನ್ನು ಕಾರ್ಮಿಕರು ತಮ್ಮ ಮಧ್ಯೆಯೇ ಚಿಲ್ಲರೆ ಮಾಡುವ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳಪೆ ಪಡಿತರ ಅಕ್ಕಿ
ನವೆಂಬರ್ನಲ್ಲಿ ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳಿಗೆ ತಡವಾಗಿ ಅಕ್ಕಿ, ಉಪ್ಪು, ಸಕ್ಕರೆ, ತಾಳೆಎಣ್ಣೆ ಬಂದಿದೆ. ಆದರೆ, ಬಹುತೇಕ ನ್ಯಾಯಬೆಲೆ ಅಂಗಡಿಗೆ ಬಂದ ಅಕ್ಕಿ ನಾಯಿಗೆ ಸಹ ತಿನ್ನಲು ಕೊಡಲು ಆಗುವದಿಲ್ಲ. ಹುಳ-ಹುಪ್ಪಟದಿಂದ ಕಲ್ಲು ಮಿಶ್ರಿತ ಅಕ್ಕಿ ಬಂದಿದೆ. ಸರಕಾರ ಇಂತಹ ಅಕ್ಕಿಯನ್ನು ಕಾಟಾಚಾರಕ್ಕೆ ಯಾವ ಪುರುಷಾರ್ಥಕ್ಕೆ ಜನರಿಗೆ ನೀಡುತ್ತಾರೊ ಎಂಬದು ಗ್ರಾಹಕರ ಪ್ರಶ್ನೆಯಾಗಿದೆ.
ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿ, ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ನ್ಯಾಯಬೆಲೆ ಅಂಗಡಿ, ಹರದೂರು, ಗರಗಂದೂರು, ನ್ಯಾಯಬೆಲೆ ಅಂಗಡಿ, ಐಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನ್ಯಾಯ ಬೆಲೆ ಅಂಗಡಿಗೆ ಈ ತಿಂಗಳಿನಲ್ಲಿ ಬಂದ ಪಡಿತರ ಅಕ್ಕಿ ತೀರಾ ಕಳಪೆಯಾಗಿದ್ದು, ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ.
ರೂ. 500 ಮತ್ತು ರೂ. 1000 ಮುಖ ಬೆಲೆಯ ಹಳೆಯ ನೋಟುಗಳನ್ನು ಅಂಗಡಿಗಳಲ್ಲಿ, ಜೌಷಧಿ ಅಂಗಡಿ, ಪೆಟ್ರೋಲ್ ಬಂಕ್, ಅಂಚೆ ಕಚೇರಿ, ಮದ್ಯದಂಗಡಿಗಳಲ್ಲಿ ಬದಲಾಯಿಸಲು ‘ನಕಾರ’ ವ್ಯಕ್ತಪಡಿಸುತ್ತಿರುವದರಿಂದ ಶ್ರೀಸಾಮಾನ್ಯರು ತೊಂದರೆಗೆ ಒಳಗಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಚರಿತ್ರಾರ್ಹ ದಿಟ್ಟಹೆಜ್ಜೆ ಬಗ್ಗೆ ಸಾರ್ವತ್ರಿಕವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಬಡವರು, ಕೂಲಿ ಕಾರ್ಮಿಕರು ನೋಟು ಬದಲಾವಣೆಯ ಅಡಕತ್ತರಿಗೆ ಸಿಲುಕಿ ಹೈರಾಣಾಗಿ ಹೋಗಿದ್ದಾರೆ.
ಆಸ್ಪತ್ರೆಗಳಲ್ಲಿ ಹಳೆಯ ರೂ. 500 ರೂ. 1000 ನೋಟು ತೆಗದುಕೊಳ್ಳಬೇಕೆಂಬ ಸರಕಾರದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತೂ ಸಿಕ್ಕಿಲ್ಲ.
ಸಂತೆ ದಿನವಾದ ಭಾನುವಾರ ಸುಂಟಿಕೊಪ್ಪ, ಶುಕ್ರವಾರ ಮಡಿಕೇರಿ, ಶನಿವಾರ ಮಾದಾಪುರದಲ್ಲಿ ಕಾರ್ಮಿಕರು ರೂ. 2000 ಹೊಸ ನೋಟನ್ನು ಹಾಗೂ ಹಳೆಯ ರೂ. 500 ಹಾಗೂ ರೂ. 1000 ನೋಟನ್ನು ಬದಲಾಯಿಸಲು ತರಕಾರಿ ಅಂಗಡಿ, ದಿನಸಿ ಅಂಗಡಿ, ಬ್ರಾಂದಿ ಅಂಗಡಿಗಳಿಗೆ ತೆರಳಿ ದಯನೀಯ ವಾಗಿ ಬೇಡಿದರೂ ಚಿಲ್ಲರೆ ಸಿಗದೆ ಮನೆಗೆ ಸಾಮಗ್ರಿ ತೆಗೆದುಕೊಂಡು ಹೋಗಲು ಪಡಿಪಾಟಿಲು ಅನುಭವಿಸಿದರು. ಮತ್ತೊಂದೆಡೆ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡುದಾರರಿಗೆ ಕಳಪೆ ಅಕ್ಕಿ ಲಭಿಸಿರುವದರಿಂದ ವಾರದಲ್ಲಿ ಹೇಗೆ ಮನೆಯ ದಿನನಿತ್ಯದ ಊಟೋಪ ಚಾರದ ವ್ಯವಸ್ಥೆ ಸರಿದೂಗಿಸುವ ದೆಂದು ಚಿಂತಾಗ್ರಹಸ್ಥರಾಗಿದ್ದಾರೆ.
ಸರಕಾರದ ಬದಲಾವಣೆಯಿಂದ ಬಡವರು ಮಾತ್ರ ಬಸವಳಿದಿದ್ದು, ಇನ್ನಷ್ಟೇ ವ್ಯವಸ್ಥೆ ಸರಿಯಾಗಬೇಕಿದೆ.