ಮಡಿಕೇರಿ, ನ. 24: ವ್ಯಕ್ತಿಯೋರ್ವರನ್ನು ಹತ್ಯೆಗೈದು ಆತನ ಪತ್ನಿಯ ಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ಕುಶಾಲನಗರ ಕಾಳಮ್ಮ ಕಾಲೋನಿಯ ನಿವಾಸಿ ಶಾಂತಮ್ಮ ಎಂಬವರ ಚಿಕ್ಕಮ್ಮನ ಮಗಳಾದ ಕೆಂಪಮ್ಮ ಎಂಬಾಕೆಯೊಂದಿಗೆ ಸಂಬಂಧವಿಟ್ಟುಕೊಂಡಿದ್ದ ವೆಂಕಟೇಶ ಕೆಂಪಮ್ಮಗೆ ನಿರಂತರ ಕಿರುಕುಳ ನೀಡುತ್ತಿದ್ದುದರಿಂದ ಕೆಂಪಮ್ಮ ಶಾಂತಮ್ಮಳೊಂದಿಗೆ ತಿಳಿಸಿ 7ನೇ ಹೊಸಕೋಟೆಯ ಕೂರ್ಗ್ ಕೌಂಟಿ ರೆಸಾರ್ಟ್‍ನಲ್ಲಿ ಕೆಲಸಕ್ಕೆ ಸೇರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಳು. ಈ ಬಗ್ಗೆ ಮಾಹಿತಿ ಇಲ್ಲದ ವೆಂಕಟೇಶ ತಾ. 20.5.2013 ರಂದು ರಾತ್ರಿ 9.15 ಗಂಟೆ ವೇಳೆ ಶಾಂತಮ್ಮಳ ಮನೆಗೆ ತೆರಳಿ ‘ನನ್ನ ಪತ್ನಿ ಎಲ್ಲಿ’ ಎಂದು ಪ್ರಶ್ನಿಸಿ ಶಾಂತಮ್ಮಳ ಪತಿ ನಾಗರಾಜ್ ಮೇಲೆ ಕತ್ತಿಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿ ಬಳಿಕ ಶಾಂತಮ್ಮಳ ಮೇಲೂ ಮಾರಣಾಂತಿಕ ಹಲ್ಲೆ ಮಾಡಿದ್ದ. ಈ ಬಗ್ಗೆ ಕುಶಾಲನಗರ ಪೊಲೀಸರು ಆರೋಪಿ ವೆಂಕಟೇಶ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ 1ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪವನೇಶ್ ಡಿ. ಅವರು ಆರೋಪಿ ಕೊಲೆ ಮಾಡಿದ ಅಪರಾಧಕ್ಕಾಗಿ ಕಠಿಣ ಜೀವಾವಧಿ ಶಿಕ್ಷೆ ಮತ್ತು ರೂ. 7,500 ದಂಡ ಹಾಗೂ ಕೊಲೆ ಮಾಡಲು ಯತ್ನ ನಡೆಸಿದ ಮತ್ತೊಂದು ಅಪರಾಧಕ್ಕಾಗಿ 6 ವರ್ಷಗಳ ಕಠಿಣ ಸಜೆ ಮತ್ತು ರೂ. 5 ಸಾವಿರ ದಂಡವನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಪಾವತಿಯಾಗುವ ದಂಡದ ಹಣದಲ್ಲಿ ರೂ. 7,500 ಅನ್ನು ಗಾಯಾಳು ಶಾಂತಮ್ಮ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ.

ಸರಕಾರದ ಪರ ಸರಕಾರಿ ಅಭಿಯೋಜಕರಾದ ಎಂ. ಕೃಷ್ಣವೇಣಿ ವಾದ ಮಂಡಿಸಿದರು.