ನಾಪೋಕ್ಲು, ಜ. 12: ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಿದ್ದು, ಈ ಕ್ರಮ ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಗೆ ಪ್ರೇರಣೆಯಾಗಲಿದೆ ಎಂದು ನಬಾರ್ಡ್‍ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಂ.ಸಿ. ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮತ್ತು ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಚೆಯ್ಯಂಡಾಣೆಯ ಮಹಿಳಾ ಸಮಾಜದಲ್ಲಿ ನಡೆದ ನಗದು ರಹಿತ ಆರ್ಥಿಕ ಸಾಕ್ಷರತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ನಗದು ರಹಿತ ಡಿಜಿಟಲ್ ಆರ್ಥಿಕ ಜನ ಜಾಗೃತಿ ಯೋಜನೆ ಜಿಲ್ಲೆಯ 20 ಪ್ರಾಥಮಿಕ ಸೇವಾ ಕೇಂದ್ರಗಳ ಸಹಯೋಗದೊಂದಿಗೆ ನಡೆಯುತ್ತಿದ್ದು, ಪ್ರತಿಯೊಬ್ಬ ರೈತರಿಗೆ ಸ್ವಸಹಾಯ ಸಂಘದ ಸದಸ್ಯರಿಗೆ ಆರ್ಥಿಕ ಬದಲಾವಣೆಯ ಬಗ್ಗೆ ಮನವರಿಕೆ ಮಾಡಿ ನಗದು ರಹಿತ ವಹಿವಾಟಿಗೆ ಪ್ರೇರಣೆ ನೀಡಲು ಪ್ರಯತ್ನಿಸಲಾಗುತ್ತಿದೆ.

ಭವಿಷ್ಯದ ದಿನಗಳಲ್ಲಿ ನಗದು ರಹಿತ ವಹಿವಾಟನ್ನು ಅಳವಡಿಸಿ ಕೊಳ್ಳುವ ಮೂಲಕ ಭಾರತವನ್ನು ಬಲಿಷ್ಟ ರಾಷ್ಟ್ರವನ್ನಾಗಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಯ್ಯಂಡಾಣೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಎಂ.ಎ. ಚೆಂಗಪ್ಪ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸ್ವಸಹಾಯ ಗುಂಪುಗಳ ನೋಡಲ್ ಅಧಿಕಾರಿ ತುಂಗರಾಜ್ , ಜಿಲ್ಲಾ ನಬಾರ್ಡ್‍ನ ಸಿಬ್ಬಂದಿ ರಶಿತಾ ಮುತ್ತಣ್ಣ , ಜಿಲ್ಲಾ ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಎಂ.ಎ. ಚೇತನ್, ಚೆಯ್ಯಂಡಾಣೆಯ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೇಬಿ ಶಿವಪ್ಪ , ನಿರ್ದೇಶಕರಾದ ಪೂಕ್ಕೂಳಂಡ್ರ ದನೋಜ್ , ಕುಡಿಯರ ಅಪ್ಪಯ್ಯ ಹಾಗೂ ಇತರರು ಉಪಸ್ಥಿತರಿದ್ದರು.

ಮೀನಾಕ್ಷಿ ಶಿವರಾಮ್ ಪ್ರಾರ್ಥಿಸಿ, ನಿರ್ದೇಶಕ ತೋಟಂಬೈಲು ಅನಂತ ಕುಮಾರ್ ಸ್ವಾಗತಿಸಿ, ಕೃಷಿ ಪತ್ತಿನ ಸಹಕಾರ ಸಂಘದ ನಿರ್ವಹಣಾಧಿಕಾರಿ ಸಿ.ಎಂ. ಗೋಪಿ ನಿರೂಪಿಸಿ, ನಿರ್ದೇಶಕ ಕುಕ್ಕೆಮನೆ ಸುಬ್ರಮಣ್ಯ ವಂದಿಸಿದರು.