ಮಡಿಕೇರಿ, ಜ. 12: ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮತ್ತು ಸದಸ್ಯರು ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಮಾರುಕಟ್ಟೆ ಕಾಮಗಾರಿಯನ್ನು ಪರಿಶೀಲನೆ ಮಾಡಿದರು.

ಬಳಿಕ ಮಾತನಾಡಿದ ನಗರಸಭೆ ಅಧ್ಯಕ್ಷರು ಮೇ ಅಂತ್ಯದೊಳಗೆ ಮಾರುಕಟ್ಟೆ ಕಾಮಗಾರಿ ಪೂರ್ಣ ಗೊಳ್ಳಲಿದ್ದು, ಜೂನ್ ಮೊದಲ ವಾರದಲ್ಲಿ ಸಾರ್ವಜನಿಕರಿಗೆ ಸಮರ್ಪಿಸ ಲಾಗುವದು ಎಂದು ತಿಳಿಸಿದರು.

ಸರ್ಕಾರ ನಗರೋತ್ಥಾನ ಒಂದನೇ ಹಂತದಲ್ಲಿ ಮಾರುಕಟ್ಟೆ ಕಾಮಗಾರಿ ನಿರ್ಮಾಣಕ್ಕಾಗಿ ರೂ. 5 ಕೋಟಿ ಬಿಡುಗಡೆ ಮಾಡಿದೆ.

ಆದರೆ ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ ಎಂದು ಕಾವೇರಮ್ಮ ಸೋಮಣ್ಣ ತಿಳಿಸಿದರು.

ನಗರೋತ್ಥಾನ ಮೂರನೇ ಹಂತದಲ್ಲಿ ಕುಡಿಯುವ ನೀರು ಸೇರಿದಂತೆ ನಗರದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ರೂ. 35 ಕೋಟಿ ಮಂಜೂರಾಗಿದ್ದು, ಈಗಾಗಲೇ ರೂ. 29 ಕೋಟಿ ಬಿಡುಗಡೆಯಾಗಿದೆ. ಮಾಡಬೇಕಿದೆ ಎಂದು ಅಧ್ಯಕ್ಷರು ತಿಳಿಸಿದರು. ನಗರದಲ್ಲಿ ಖಾಸಗಿ ಬಸ್ ನಿಲ್ದಾಣ ಕಾಮಗಾರಿಗಾಗಿ ರೂ. 5 ಕೋಟಿ ವಿನಿಯೋಗ ಮಾಡುತ್ತಿದ್ದು, ಜಿಲ್ಲಾಧಿಕಾರಿ ಅವರ ಅನುಮೋದನೆ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಕಾವೇರಮ್ಮ ಸೋಮಣ್ಣ ಮಾಹಿತಿ ನೀಡಿದರು.

ಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಗಮನಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ನಗರಸಭೆಗೆ 15 ಕೋಟಿ ರೂ. ನಿಗದಿಪಡಿಸಿದೆ. ಆ ದಿಸೆಯಲ್ಲಿ ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗುವದು ಎಂದು ನಗರಸಭೆ ಅಧ್ಯಕ್ಷರು ತಿಳಿಸಿದರು.

ಕಳೆದ ಅಕ್ಟೋಬರ್‍ನಲ್ಲಿ ನಡೆದ ದಸರಾ ಕಾರ್ಯಕ್ರಮಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪ್ರಯತ್ನದಿಂದ ರೂ. 60 ಲಕ್ಷ ಬಿಡುಗಡೆಯಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಕಾವೇರಮ್ಮ ಸೋಮಣ್ಣ ಅವರು ಮಾಹಿತಿ ನೀಡಿದರು.

ನಗರಸಭೆ ಸದಸ್ಯರಾದ ಎಚ್.ಎಂ.ನಂದಕುಮಾರ್, ಕೆ.ಎಂ.ಬಿ. ಗಣೇಶ್, ಮನ್ಸೂರ್, ಪೀಟರ್, ಪ್ರಕಾಶ್ ಆಚಾರ್ಯ, ಜುಲೈಕಾಬಿ, ಲೀಲಾಶೇಷಮ್ಮ, ಚುಮ್ಮಿ ದೇವಯ್ಯ, ವೆಂಕಟೇಶ್, ಉದಯ ಕುಮಾರ್, ಯತೀಶ್ ಕುಮಾರ್ ಇತರರು ಇದ್ದರು.