ನಾಪೆÇೀಕ್ಲು, ಅ. 10 : ಕೊಡಗು ಜಿಲ್ಲೆ ಸೇರಿದಂತೆ ಮಲೆನಾಡನ್ನಾಳಿದ ಸಂಬಾರ ರಾಣಿಯೆಂದೇ ಖ್ಯಾತಿ ಪಡೆದ ಏಲಕ್ಕಿ ಇಂದು ಮಲೆನಾಡಿನಿಂದ ಕಣ್ಮರೆಯಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ಕೃಷಿಕರ ಅನಾಸಕ್ತಿಯಿಂದ ನೇಪಥ್ಯಕ್ಕೆ ಸರಿಯತೊಡಗಿದೆ. ವರ್ಷದಿಂದ ವರ್ಷಕ್ಕೆ ಬೆಳೆ ಅವಲಂಬಿತ ಕೃಷಿಕರ ಸಂಖ್ಯೆ ಕುಸಿಯುತ್ತಿದೆ.

ಹಿಂದೆ ಮಲೆನಾಡಿನಲ್ಲಿ ಏಲಕ್ಕಿಯದೇ ಕಾರುಬಾರು. ಏಲಕ್ಕಿ ಬೆಳೆಯುವವರೇ ಊರಿನ ದೊಡ್ಡಪ್ಪ ಎಂಬ ಕಾಲವೊಂದಿತ್ತು. ಕೆ.ಜಿ.ಯಿಂದ ಆರಂಭಿಸಿ ಮಣ ಲೆಕ್ಕಾಚಾರದಲ್ಲಿ ಏಲಕ್ಕಿ ಫಸಲನ್ನು ಅಳೆಯಲಾಗುತಿತ್ತು. ಆದರೆ ಇಂದು ಸಂಬಾರ ರಾಣಿಗೆ ಮುಪ್ಪು ಆವರಿಸಿದಂತೆ ಗೋಚರಿಸುತ್ತಿದೆ.

ಏಲಕ್ಕಿ ಕೃಷಿಯ ಬಗ್ಗೆ ಅತ್ಯಂತ ಒಲವು ಇರುವ ಸಾಂಪ್ರದಾಯಿಕ ಕೃಷಿಕರು ಮಾತ್ರ ಈ ಬೆಳೆಯನ್ನು ಪೆÇೀಷಿಸುತ್ತಿದ್ದಾರೆ. ಕಾಫಿ ಬೆಳೆ ತನ್ನ ಪ್ರಭಾವ ಬೀರಿದ ನಂತರ ಕಾಡು ಕಣ್ಮರೆಯಾಗಿ ಏಲಕ್ಕಿ ಬೆಳೆ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿಯೂ ಅಲ್ಪ ಪ್ರಮಾಣದಲ್ಲಿಯಾದರೂ ಏಲಕ್ಕಿ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಏಲಕ್ಕಿ ಕೃಷಿಯಲ್ಲಿ ಹಲವು ಬೆಳೆಗಾರರು ತಮ್ಮನ್ನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಅವರಿಗೆ ಈ ವರ್ಷ ಶನಿದೆಸೆ ಎಂದೇ ಹೇಳಬಹುದಾಗಿದೆ. ಬೆಳೆದ ಏಲಕ್ಕಿ ಕಾಯಿಯನ್ನು ತೂತುಗೊಳಿಸಿ ಅದರೊಳಗಿನ ಕಾಳನ್ನು ಯಾವದೋ ಕೀಟ ಸಂಪೂರ್ಣವಾಗಿ ತಿಂದು ಮುಗಿಸಿರುವದು ಕಂಡು ಬಂದಿದೆ. ಇದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಒಂದು ಕೆ.ಜಿ.ಗಾಗುವಷ್ಟು ಏಲಕ್ಕಿ ಕಾಯಿ ಕುಯ್ದರೂ ಒಂದು ಕಾಳು ಏಲಕ್ಕಿ ಕಾಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಯಾವದೇ ಮಾಹಿತಿ ಲಭಿಸದ ಬೆಳೆಗಾರರು ಒಂದು ವರ್ಷದ ಏಲಕ್ಕಿ ಫಸಲನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ತಿಳಿಯದೆ ಪರಿತಪಿಸುತ್ತಿದ್ದಾರೆ.

ಇತರ ಕೃಷಿ ಉತ್ಪನ್ನಗಳಿಗೆ ಹೋಲಿಸಿದರೆ ಏಲಕ್ಕಿಯ ಬೆಲೆ ನಿಂತ ನೀರು. ಎಲ್ಲಾ ಪದಾರ್ಥಗಳ ಬೆಲೆಯೂ ಕಳೆದ ಸುಮಾರು 25 ವರ್ಷಗಳಲ್ಲಿ ನಾಲ್ಕುಪಟ್ಟು ಹೆಚ್ಚಿದ್ದರೆ, ಏಲಕ್ಕಿಗೆ ಮಾತ್ರ ಅದೃಷ್ಟ ಖುಲಾಯಿಸಲೇ ಇಲ್ಲ. ಅಂದು ಕಿಲೋಗೆ ಒಂದು ಸಾವಿರ ರೂ. ಇದ್ದ ಬೆಲೆ ಇಂದು ಸಹ ಅದೇ ಬೆಲೆಗೇ ಬಿಕರಿಯಾಗುತ್ತಿದೆ. ಬೆಲೆ ಏರಿಕೆ-ಇಳಿಕೆಯ ಹಾವು ಏಣಿಯಾಟದಲ್ಲಿ ಬೇಸತ್ತು ಬಹುತೇಕ ಬೆಳೆಗಾರರು ಈ ಕೃಷಿಯನ್ನೇ ಕೈಬಿಟ್ಟಿದ್ದಾರೆ. ಅದರೊಂದಿಗೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿರುವ ಕಟ್ಟೆರೋಗ ಹಾಗೂ ಕೊಕ್ಕೆ ಕಂದು ರೋಗಕ್ಕೆ ಕಳೆದ ಸುಮಾರು 35-40 ವರ್ಷಗಳಿಂದ ಪರಿಹಾರವೇ ಸಿಕ್ಕಿಲ್ಲ.

ಬೇರೆ ಕಡೆ ಉತ್ತಮ ದಿನಗೂಲಿ ಪಡೆಯುವ ಕಾರ್ಮಿಕರು ಏಲಕ್ಕಿ ಕೃಷಿಯ ಕೆಲಸಕ್ಕೆ ಬಂದಾಗಲೂ ಅದೇ ಕೂಲಿಯನ್ನು ನಿರೀಕ್ಷಿಸುವುದು ಸಹಜ. ಆದರೆ ಈಗಿನ ಪರಿಸ್ಥಿತಿಯಲ್ಲಿ ಅಷ್ಟಾಗಿ ಆದಾಯ ತಂದು ಕೊಡದ ಏಲಕ್ಕಿ ಕೃಷಿ ಮುಂದಿನ ದಿನಗಳಲ್ಲಿ ಇತಿಹಾಸದ ಪುಟ ಸೇರಿದರು ಅಚ್ಚರಿ ಪಡಬೇಕಾಗಿಲ್ಲ.