ಮಡಿಕೇರಿ, ಜು. 16: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಇರುವ ವಿವಿಧ ಸ್ನಾತಕೋತ್ತರ ಕೋರ್ಸ್‍ಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶದಿಂದ ತಾ.18 ರಂದು ಕಾಲೇಜಿನಲ್ಲಿ “ಕ್ಯಾಂಪಸ್ ನೋಡ ಬನ್ನಿ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆÀ ಡಾ.ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ವರ್ಷ ಕೊಣಾಜೆಯಲ್ಲಿರುವ ವಿಶ್ವವಿದ್ಯಾನಿಲಯ ಕ್ಯಾಂಪಸ್‍ನಲ್ಲಿ ಓಪನ್ ಹೌಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ದೂರದ ಊರಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಂಗಳೂರು ವಿಶ್ವವಿದ್ಯಾನಿಲಯ ಆಡಳಿತಕ್ಕೊಳಪಟ್ಟಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮವನ್ನು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಉದ್ಘಾಟಿಸಲಿದ್ದು, ವಿಶ್ವವಿದ್ಯಾನಿಲಯ ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್ ಅಧ್ಯಕ್ಷತೆ ವಹಿಸಲಿರುವರು ಎಂದು ಅವರು ಹೇಳಿದರು.

ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಲಭ್ಯವಿರುವ ಸೌಲಭ್ಯಗಳು, ಪ್ರಾಧ್ಯಾಪಕರ ಸಾಧನೆಗಳು, ಉದ್ಯೋಗಾವಕಾಶಗಳು, ಹಾಸ್ಟೆಲ್ ಸೌಲಭ್ಯ ಮತ್ತಿತರ ಸಮಗ್ರ ಮಾಹಿತಿ ಪಡೆಯಬಹುದು. ಪ್ರವೇಶ ಬಯಸುವ ವಿದ್ಯಾರ್ಥಿಗಳು ಆಯಾ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ಭೋಧಕ

(ಮೊದಲ ಪುಟದಿಂದ) ವರ್ಗದೊಂದಿಗೆ ನೇರ ಸಮಾಲೋಚನೆ ಮಾಡುವ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಕೋರ್ಸ್‍ಗಳ ಪ್ರವೇಶಕ್ಕೆ ಅರ್ಜಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಸಹಕಾರದಿಂದ ಕಾರ್ಯಪ್ಪ ಕಾಲೇಜು ಪ್ರಗತಿ ಪಥದತ್ತ ಸಾಗುತ್ತಿದ್ದು, ಇದಕ್ಕೆ ಪೂರಕವಾಗಿ ಈಗಾಗಲೇ ಈ ಕಾಲೇಜಿಗೆ “ಶ್ರೇಷ್ಠತಾ ಸಾಮಥ್ರ್ಯವುಳ್ಳ ಕಾಲೇಜು” ಎಂಬ ಮಾನ್ಯತೆ ದೊರೆತ್ತಿದೆ. ಇದರೊಂದಿಗೆ ಪ್ರತಿಷ್ಠಿತ ನ್ಯಾಕ್ ಸಂಸ್ಥೆಯಿಂದ “ಎ” ಗ್ರೇಡ್‍ನ್ನು ಕೂಡ ಪಡೆದಿದ್ದು, ಕಾಲೇಜಿನಲ್ಲಿ 1,700 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಡಾ.ಪಾರ್ವತಿ ಅಪ್ಪಯ್ಯ ಮಾಹಿತಿ ನೀಡಿದರು.

ಭೌತಶಾಸ್ತ್ರ ವಿಭಾಗದ ಸಂಚಾಲಕ ಡಾ.ಜಗನ್ನಾಥ್ ಮಾತನಾಡಿ, ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ ಭೌತಶಾಸ್ತ್ರ, ಕಲಾ ವಿಭಾಗದಲ್ಲಿ ಎಂ.ಎ.ಇಂಗ್ಲೀಷ್, ಎಂ.ಎ.ಅರ್ಥಶಾಸ್ತ್ರ ಹಾಗೂ ವಾಣಿಜ್ಯ ವಿಭಾಗದಲ್ಲಿ ಎಂಬಿಎ ಕೋರ್ಸು ಗಳಿದ್ದು, ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಕೊಡಗಿನ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬಲ್ಲ ಟ್ರಾವೆಲ್ ಮತ್ತು ಟೂರಿಸಂ ಮ್ಯಾನೇಜ್‍ಮೆಂಟ್ ಕೋರ್ಸ್ ಕಳೆದ ವರ್ಷದಿಂದ ಆರಂಭ ಗೊಂಡಿದ್ದು, ಈ ವಿಭಾಗದ ಬಗ್ಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಆಸಕ್ತಿ ಇದೆ ಎಂದರು.

ಸರಕಾರಿ ಕಾಲೇಜು ಮತ್ತು ಖಾಸಗಿ ಕಾಲೇಜುಗಳಲ್ಲಿರುವ ಸೌಲಭ್ಯಗಳ ವ್ಯತ್ಯಾಸದ ಕುರಿತು “ಕ್ಯಾಂಪಸ್ ನೋಡ ಬನ್ನಿ” ಕಾರ್ಯಕ್ರಮದಲ್ಲಿ ವಿವರಿಸಲಾಗುವದು. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರಿಗೆ ವಿಶೇಷ ಸೌಲಭ್ಯ ಗಳು ಹಾಗೂ ರಿಯಾಯಿತಿಗಳಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ನಿಲಯಗಳ ವ್ಯವಸ್ಥೆಯಿದ್ದು, ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಡಾ.ಜಗನ್ನಾಥ್ ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕರುಗಳಾದ ರವಿಶಂಕರ್, ಡಾ.ತಿಮ್ಮಯ್ಯ, ಡಾ.ನಯನ ಕಶ್ಯಪ್ ಹಾಗೂ ವಿಜಯ ಉಪಸ್ಥಿತರಿದ್ದರು.