ಶ್ರೀಮಂಗಲ, ಜು. 16: ದ.ಕೊಡಗಿನ ಅರಣ್ಯದ ಅಂಚಿನಲ್ಲಿರುವ ಗ್ರಾಮಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆ ಹಿಂಡುಗಳನ್ನು ಅರಣ್ಯಗಟ್ಟಲು ಅರಣ್ಯ ಇಲಾಖೆಯಿಂದ ಎರಡು ದಿನದ ಬೃಹತ್ ಕಾರ್ಯಾಚರಣೆ ವಿಫಲ ಕಂಡ ಬೆನ್ನಲ್ಲೆ ಇದೀಗ ಕಾಡಾನೆ ಹಿಂಡುಗಳು ತಮ್ಮಷ್ಷಕ್ಕೆ ಅರಣ್ಯಕ್ಕೆ ಸೇರಿಕೊಂಡಿದ್ದು ಇದರಿಂದ ಈ ಭಾಗದ ಗ್ರಾಮಸ್ಥರೊಂದಿಗೆ ಅರಣ್ಯ ಇಲಾಖೆ ಸಹ ನಿಟ್ಟುಸಿರು ಬಿಟ್ಟಿದೆ. ಅರಣ್ಯದಂಚಿನ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ 6 ಮರಿ, 13 ಹೆಣ್ಣಾನೆ, ಹಾಗೂ 3 ಗಂಡಾನೆ ಯೊಂದಿಗೆ ಒಟ್ಟು 22 ಬೃಹತ್‍ಗಾತ್ರದ ಕಾಡಾನೆಗಳ ಹಿಂಡು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ, ಬ್ರಹ್ಮಗಿರಿ ರಕ್ಷಿತಾರಣ್ಯದ ಅಂಚಿನಲ್ಲಿರುವ ಕುಟ್ಟ, ನಾಲ್ಕೇರಿ, ಶ್ರೀಮಂಗಲ ಮತ್ತು ಕೆ.ಬಾಡಗ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ಬೀಡುಬಿಟ್ಟು ಈ ವ್ಯಾಪ್ತಿಯಲ್ಲಿ ತೀವ್ರತರದ ಕಾಡಾನೆ ಹಾವಳಿ ಎದುರಿಸುವಂತಾಯಿತು. ಒಂದು ತಿಂಗಳ ಅವಧಿಯಲ್ಲಿ ಈ ವ್ಯಾಪ್ತಿಯಲ್ಲಿ ಬೆಳೆಗಾರರ ತೋಟ ಹಾಗೂ ಗದ್ದೆಗಳಿಗೆ ಕಾಡಾನೆಗಳಿಂದ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಶ್ರೀಮಂಗಲ ಕ್ಷೇತ್ರದ ಜಿ.ಪಂ. ಸದಸ್ಯ ಮುಕ್ಕಾಟ್ಟಿರ ಶಿವು ಮಾದಪ್ಪ ಈ ಕಾಡಾನೆ ಹಿಂಡುಗಳನ್ನು ಅರಣ್ಯಗಟ್ಟಲು ಈ ಭಾಗದ ಅರಣ್ಯಾಧಿಕಾರಿಗಳು - ಪೊಲೀಸ್ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿ ಕಾರ್ಯಾಚರಣೆಗೆ ಚಾಲನೆ ನೀಡಿದರು.

ಜಿಲ್ಲಾ ಮೀಸಲು ಪೇಲೀಸ್ ಪಡೆ ಸೇರಿದಂತೆ ಶ್ರೀಮಂಗಲ ವಲಯ ಅರಣ್ಯ, ಪೊನ್ನಂಪೇಟೆ ವಲಯ ಅರಣ್ಯ, ನಾಗರಹೊಳೆ, ತಿತಿಮತಿ ಮತ್ತು ಮಾಕುಟ್ಟ ವಲಯ ಅರಣ್ಯ ವ್ಯಾಪ್ತಿಯ 65 ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡದೊಂದಿಗೆ ಸ್ಥಳೀಯ ಪೊಲೀಸರು, ಸಾರ್ವಜನಿಕರು ಕಾಡಾನೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. 2 ದಿನದ ಕಾರ್ಯಾಚರಣೆಯಲ್ಲಿ ಸಾಕಷ್ಟು ಪರಿಣತಿ ಹೊಂದಿದ ಸಿಬ್ಬಂದಿಗಳು ಹಾಗೂ ಅಧಿಕಾರಿ ವರ್ಗ ಹರಸಾಹಸಪಟ್ಟರೂ ನಿರೀಕ್ಷಿತ ಫಲ ಸಿಗದೆ ಅಸಹಾಯಕರಾದರು. ತೈಲಾ ಗ್ರಾಮದಲ್ಲಿ ಕಾರ್ಯಾಚರಣೆಯ ಮೊದಲ ದಿನ ಗೋಚರಿಸಿದ ಕಾಡಾನೆ ಹಿಂಡುಗಳನ್ನು ನಾಗರಹೊಳೆ ಅಭಯಾರಣ್ಯಕ್ಕೆ ಸೇರಿಸಲು ಅರಣ್ಯ ಇಲಾಖೆ ಯೋಜನೆ ರೂಪಿಸಿದ್ದರೂ, ಕಾಡಾನೆಗಳು ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ತೆರಳುವ ಮೂಲಕ ತಮ್ಮ ಯೋಜನೆಯನ್ನು ಉಲ್ಟಾ ಮಾಡಿ ಆತಂಕ ಮೂಡಿಸಿದ್ದವು. ಇದರಿಂದ ತಾವು ಹೇಳಿದಂತೆ ಕಾಡಾನೆಗಳು ಕೇಳುವದಿಲ್ಲ ಎಂಬದನ್ನು ಅರಿತ ಕಾರ್ಯಾಚರಣೆ ತಂಡ, ಕಾಡಾನೆಗಳು ಯಾವ ಭಾಗಕ್ಕೆ ತೆರಳಿದವು ಅದರ ಹಿಂದೆ ಹಿಂಬಾಲಿಸುತ್ತಾ ಸಾಗುವಂತಾಯಿತು.

ಕಾಡಾನೆ ಕಾರ್ಯಾಚರಣೆಗೆ ಹಿಂಡಿನಲ್ಲಿದ್ದ ಭಾರೀ ಗಾತ್ರದ ಗರ್ಭಿಣಿ ಆನೆ, ವೇಗವಾಗಿ ಸಂಚರಿಸಲು ಸಾಧ್ಯವಾಗದೇ ಇರುವದು ಇನ್ನೊಂದೆಡೆ ಹಳ್ಳ ದಿಬ್ಬದಂತಹ ಪ್ರದೇಶದಲ್ಲಿ ತೆರಳುವದು ಗರ್ಭಿಣಿ ಹೆಣ್ಣಾನೆಗೆ ಅಪಾಯಕಾರಿ ಎನ್ನುವದರ ಸೂಕ್ಮತೆ ಅರಿತಿದ್ದ ಕಾಡಾನೆ ಹಿಂಡುಗಳು ಕಾಫಿ ತೋಟದಿಂದ ಅರಣ್ಯದ ಕಡೆಗೆ ತೆರಳಲು ಹಿಂದೇಟು ಹಾಕುತ್ತಿದ್ದುದ್ದು ಕಂಡುಬಂತು. ಇನ್ನೊಂದೆಡೆ 6 ಮರಿಗಳಿರುವದರಿಂದ ಮರಿಗಳನ್ನು ಬಿಟ್ಟು ವೇಗವಾಗಿ ಮುಂದೆ ಸಾಗುವದು ಸಹಾ ಸಾಧ್ಯವಿಲ್ಲದ ಕಾರಣ ಕಾರ್ಯಾಚರಣೆ ಸಂದರ್ಭದ ಬೆದರು ಗುಂಡು, ಪಟಾಕಿ ಶಬ್ಧ, ತಮಟೆ ಶಬ್ಧಗಳಿಂದ ಬೆದರಿ ಕಾಫಿ ತೋಟದಿಂದ ಹೊರ ಸುಳಿಯಲು ಮುಂದಾಗಲಿಲ್ಲ.

ಆದರೆ ಮೊದಲ ದಿನದ ಕಾರ್ಯಾಚರಣೆ ಆರಂಭದ ವೇಳೆ ಬೆಳಿಗ್ಗೆ 10.00ಗಂಟೆ ಸಮಯದಲ್ಲಿ ಕುಟ್ಟ ಗ್ರಾ.ಪಂ. ವ್ಯಾಪ್ತಿಯ ತೈಲಾ ಗ್ರಾಮದಲ್ಲಿ ಈ 22 ಕಾಡಾನೆಗಳ ಹಿಂಡು ಗೋಚರಿಸಿತು. ಆ ದಿನ ಸಂಜೆವರೆಗೂ ಎಲ್ಲ ರೀತಿಯಲ್ಲಿ ಪ್ರಯತ್ನಿಸಿದರೂ ಅದೇ ಗ್ರಾಮದ 1-2 ಕಿ.ಮೀ. ಸುತ್ತಳತೆಯಲ್ಲೇ ಅಡ್ಡಾದಿಡ್ಡಿ ಸಂಚರಿಸಿದ ಕಾಡಾನೆಗಳು ಮುಂದೆ ಕದಲಲಿಲ್ಲ. ಆದರೆ ಎರಡೇ ದಿನದ ಕಾರ್ಯಚರಣೆಗೆ ಕಾಡಾನೆ ಹಿಂಡುಗಳ ಜಾಡು ಹಿಡಿದು ಹೊರಟ ಅರಣ್ಯ ಸಿಬ್ಬಂದಿಗಳಿಗೆ ಅಂದು ಬೆಳಿಗ್ಗೆ ತೈಲಾ ಗ್ರಾಮದಿಂದ ಮಂಚಳ್ಳಿ ಗ್ರಾಮಕ್ಕೆ ಈ ಕಾಡಾನೆ ಹಿಂಡು ತೆರಳಿರುವದು ಗೋಚರಿಸಿತು. ಎರಡನೇ ದಿನದ ಕಾರ್ಯಾಚರಣೆಯಲ್ಲಿಯೂ ಕಾಡಾನೆಗಳು ಕುಟ್ಟ ಸಮೀಪ ಮಂಚಳ್ಳಿ ಗ್ರಾಮದ ಮಾಚಿಮಾಡ ರಾಜರವರ ಕ್ಯಾಲಿಫೋರ್ನಿಯಾ ತೋಟದೊಳಗೆ ಸೇರಿಕೊಂಡ ಕಾಡಾನೆಗಳು ಸಂಜೆವರೆಗೆ ನಡೆದ ಕಾರ್ಯಾಚರಣೆಗೆ ಸ್ಪಂದಿಸಲಿಲ್ಲ. ಇದರ ಮಧ್ಯೆ ಎರಡು ದಿನದ ಕಾರ್ಯಾಚರಣೆಯಿಂದ ತೀವ್ರವಾಗಿ ಬೆದರಿದ ಹಾಗೂ ಬಳಲಿದ ಕಾಡಾನೆಗಳು ಕಾರ್ಯಾಚರಣೆ ಮುಗಿದ ರಾತೋ ರಾತ್ರಿ ಕೊರಿಮಲೆ ಮೂಲಕ ಬ್ರಹ್ಮಗಿರಿ ರಕ್ಷಿತಾರಣ್ಯಕ್ಕೆ ತಮ್ಮ ಪಾಡಿಗೆ ತಾವು ಸೇರಿಕೊಂಡಿವೆ.

ಕಾರ್ಯಾಚರಣೆ ಮುಗಿದ ನಂತರದ ದಿನದಲ್ಲಿ ಕಾಡಾನೆಗಳ ಜಾಡು ಹಿಡಿದ ಅರಣ್ಯ ಇಲಾಖಾ ಸಿಬ್ಬಂದಿಗಳಿಗೆ ಕಾಡಾನೆ ಹಿಂಡುಗಳು ಮಂಚಳ್ಳಿ ಗ್ರಾಮದ ಕೊರಿಮಲೆ ಮೂಲಕ ಅರಣ್ಯಕ್ಕೆ ತೆರಳಿರುವ ಪಾದದ ಗುರುತಿನಿಂದ ಖಚಿತವಾಗಿದೆ. ಕಾಡಾನೆಗಳು ತೆರಳಿರುವ ಹೆಜ್ಜೆ ಗುರುತು ಈ ಭಾಗದಲ್ಲಿ ಮಳೆ ಇರುವದರಿಂದ ಹಸಿಯಾಗಿರುವ ನೆಲದಲ್ಲಿ ಮೂಡಿ ಬಂದಿದೆ.